ಚನ್ನರಾಯಪಟ್ಟಣ: ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು ಸಾದ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಬಿಪ್ರಾಯಪಟ್ಟರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಔದ್ಯಮಿಕ ಕೇಂದ್ರ ವಿಶೇಷ ಸುಧಾರಿತ ಉಪಕರಣಗಳ ಯೋಜನೆಯಡಿ ಕುಶಲಕರ್ಮಿಗಳಿಗೆ ಹೊಲಿಗೆ ಯಂತ್ರ ಮತ್ತು ಉಪಕರಣಗಳನ್ನು ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಆಸಕ್ತಿ ಇರುವ ಕೌಶಲಧಾರಿತ ತರಬೇತಿ ಪಡೆದು ವೃತ್ತಿ ಕೈಗೊಂಡರೆ ಜೀವನಮಟ್ಟ ಸುಧಾರಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಸದೃಢವಾಗಲಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳನ್ನು ಪ್ರಾರಂಭಿಸಿವೆ. ಬಡ, ಮಧ್ಯಮವರ್ಗದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. 42 ಹೊಲಿಗೆ ಯಂತ್ರಗಳನ್ನು, 72 ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಕೆ.ಎಸ್. ರವಿಪ್ರಸಾದ್, ಕೈಗಾರಿಕಾ ವಿಸ್ತರಣಾಧಿಕಾರಿ ಆನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.