
ಚನ್ನರಾಯಪಟ್ಟಣ: ವಿನಾಯಕ ಕಾರು ಚಾಲಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 8ವರೆಗೆ 18 ತಂಡಗಳಿಂದ ನಿರಂತರ ಭಜನೆ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ ಪಂಚಾಮೃತ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ ಬಳಿಕ ಭಜನೆ ಆರಂಭವಾಯಿತು. ಭಜನೆ ಕಾರ್ಯಕ್ರಮವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.
ವಾಸವಿ ಭಜನಾಮಂಡಳಿ, ಬಲಮುರಿಗಣಪತಿ ಮಹಿಳಾ ಸಂಘ, ಸದ್ಗುರು, ಶೇಷಾದ್ರಿ, ಆದಿ ವಿದ್ಯಾಗಣಪತಿ ಸಂಘ, ವೆಂಕಟೇಶ್ವರ, ಬ್ರಾಹ್ಮಣರ ಮಹಿಳಾ ವೇದಿಕೆ, ಶಂಕರಕಲಾ ಕೇಂದ್ರ, ಚಂದ್ರಮೌಳೇಶ್ವರ, ಶ್ರೀನಿಧಿ, ಶ್ರಿಮುಖ ಸರಸ್ವತಿ ಕಲಾಕೇಂದ್ರ, ವೈಷ್ಣವಿ, ಮಹಾಲಕ್ಷ್ಮೀ, ಓಂಕಾರೇಶ್ವರ, ಸಪ್ತಸಾಗರ, ರೇಣುಕಾ, ಬ್ರಹ್ಮಚೈತನ್ಯ, ಸತ್ಯಸಾಯಿ ಸೇವಾ ಭಜನಾ ಮಂಡಳಿ ಹಾಗೂ ಸಮಿತಿ ಕಲಾವಿದರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾತ್ರಿ ದೇವರಿಗೆ ಪೂಜೆ ಮಾಡಿದ ಬಳಿಕ 18 ಭಜನಾ ತಂಡಗಳಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಸೋಮವಾರ ಬೆಳಿಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ ಮಾಡಿ ಬೆಣ್ಣೆ ಅಲಂಕಾರ ಮಾಡಿ ರಾಮತಾರಕ ಹೋಮ ನೆರವೇರಿಸಲಾಗುವುದು. ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ದೇವರಿಗೆ ಮಂಗಳಾರತಿ ಜರುಗಿದ ಬಳಿಕ ಪ್ರತಿವರ್ಷದಂತೆ ಸಾವಿರಾರು ಭಕ್ತರಿಗೆ ದಾಸೋಹ ಏರ್ಪಡಿಸಲಾಗಿದೆ.
ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಡಬಗೆರೆ ಮುನಿರಾಜ್ ತಂಡದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ಇದೆ. ಡಿ. 2ಕ್ಕೆ ಪಂಚಾಮೃತ ಅಭಿಷೇಕ, ರಜತ ಕವಚಧಾರಣೆ ಮಾಡಿ ವಿವಿಧಪುಷ್ಪಗಳಿಂದ ಅಲಂಕಾರ ಮಾಡಲಾಗುವುದು.
ನಂತರ ಆಂಜನೇಯ ಸ್ವಾಮಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಗುವುದು. ಅದೇ ದಿನ ಸಂಜೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಮತ್ತು ಕಲಾವಿದ ಮಂಜುನಾಥ್ ತಂಡದಿಂದ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ. ಹನುಮ ಯಂತಿ ಅಂಗವಾಗಿ ಆಸ್ಪತ್ರೆ ವೃತ್ತದಿಂದ ಕೆ.ಆರ್. ವೃತ್ತದವರೆಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ.
ಸಂಘದ ಅಧ್ಯಕ್ಷ ಬಿ.ಜೆ. ರಾಜೇಗೌಡ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಿ.ಕೆ. ಚಂದ್ರು, ಖಜಾಂಚಿ ಶಂಕರ್, ಸಹಕಾರ್ಯದರ್ಶಿ ಎಂ.ಜಿ. ತಿರುಮಲೇಶ್ ಸೇರಿ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.