ಚನ್ನರಾಯಪಟ್ಟಣ: ಪರಿಸರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ರೋಟರಿ ಕ್ಲಬ್ ವತಿಯಿಂದ ಸೇವೆ ಸಲ್ಲಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ. ವಿಜಯ್ ಹೇಳಿದರು.
ಪಟ್ಟಣದ ಮೇಗಲಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಅನುಕೂಲವಾಗುವಂತೆ ಸೋಮವಾರ ಏರ್ಪಡಿಸಿದ್ದ ಚೆಕ್ ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು. ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ ಧ್ಯೇಯವಾಗಿದೆ. ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಎಸ್.ಎಸ್. ಕುಮುದಾ ಮಾತನಾಡಿ, ಒಂದು ವರ್ಷದಿಂದ ಮೇಗಲಕೇರಿ ಸರ್ಕಾರಿ ಪ್ರೌಢಶಾಲೆಗೆ ನೋಟ್ ಪುಸ್ತಕಗಳ ವಿತರಣೆ, ಶುದ್ಧ ಕುಡಿಯುವ ನೀರು ಘಟಕ ಅಳವಡಿಸಲಾಗಿದೆ. ತರಗತಿಯಲ್ಲಿ ಪಾಠ ಮಾಡಲು ಅನುಕೂಲವಾಗುವಂತೆ ಹಸಿರು ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ಚೆಕ್ ನೀಡಲಾಗಿದೆ. ಪರಿಸರ ಕಾಳಜಿ ಮೂಡಿಸಲು ಶಾಲಾ ಆವರಣದಲ್ಲಿ ಗಿಡ ನೆಡಲಾಗಿದೆ ಎಂದು ಹೇಳಿದರು.
ಶಿಕ್ಷಕ ಸತೀಶ್, ದೈಹಿಕ ಶಿಕ್ಷಣ ನಿರ್ದೇಶಕ ಆನಂದ್ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಜಿ. ಮಲ್ಲೇಗೌಡ, ರೋಟರಿ ಕ್ಲಬ್ ಖಜಾಂಚಿ ನಟರಾಜು, ನಿರ್ದೇಶಕಿ ಎನ್.ಬಿ. ಜ್ಯೋತಿ ಭಾಗಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ನವೋದಯ ವಿದ್ಯಾ ಸಂಸ್ಥೆಗೆ ಕ್ರೀಡಾ ಸಾಮಗ್ರಿ, ತಾಲ್ಲೂಕಿನ ಬಾಗೂರು ಸರ್ಕಾರಿ ಆಂಗ್ಲ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ನವೋದಯ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳಾದ ಒ.ಆರ್. ರಂಗೇಗೌಡ, ಆನಂದ್ ಕಾಳೇನಹಳ್ಳಿ, ಪ್ರಾಂಶುಪಾಲ ಎ.ಟಿ. ಸಂಜಯ್ ಕುಮಾರ್, ಉಪಪ್ರಾಂಶುಪಾಲ ಎಸ್.ಸಿ. ಸುರೇಶ್, ಮುಖ್ಯಶಿಕ್ಷಕ ಮಂಜುನಾಥ್, ರೋಟರಿ ಕ್ಲಬ್ ಪದಾಧಿಕಾರಿಗಳಾದ ಎಚ್.ಎನ್. ಪದ್ಮನಾಭ್, ಜಯಚಂದ್ರ, ಭರತ್‍ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.