ADVERTISEMENT

ಹೆತ್ತೂರು: ವಿಜೃಂಭಣೆಯ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಹತ್ತು ಸಾವಿರಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ: ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:00 IST
Last Updated 29 ಜನವರಿ 2026, 7:00 IST
ಹೆತ್ತೂರು ಸಮೀಪದ ದೊಡ್ಡನಹಳ್ಳಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಭಕ್ತರು ದರ್ಶನ ಪಡೆದರು 
ಹೆತ್ತೂರು ಸಮೀಪದ ದೊಡ್ಡನಹಳ್ಳಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಭಕ್ತರು ದರ್ಶನ ಪಡೆದರು    

ಹೆತ್ತೂರು: ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ರಾಜ್ಯದ ವಿವಿಧ ಭಾಗ, ಹೊರರಾಜ್ಯಗಳಿಂದಲೂ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದರು.

ಸಮೀಪದ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಯಕ್ಷೇತ್ರವು ಭಕ್ತರ ಅಪಾರ ನಂಬಿಕೆಯ ಕೇಂದ್ರವಾಗಿದೆ. ಆರಂಭದಲ್ಲಿ ಗದ್ದೆಯಲ್ಲಿ ಚೌಡಿ ದೇವರಾಗಿ ಪೂಜಿಸಲಾಗುವ ಈ ದೇವಿಯು, ಮರದ ಕೆಳಗೆ ಕಲ್ಲಿನ ಸ್ವರೂಪದಲ್ಲಿದ್ದು, ಭಕ್ತರ ಕಷ್ಟಗಳನ್ನು ಆಲಿಸಿ ಪರಿಹಾರ ನೀಡುತ್ತಿದ್ದ ಕಾರಣ ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚುತ್ತ ಬಂದಿದೆ.

ಸೋಮವಾರ ಸಂಜೆ 6 ಗಂಟೆಯಿಂದ ಕಳಸ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. ಗ್ರಾಮದ ಈಶ್ವರ ದೇವಸ್ಥಾನದಿಂದ ಬೆಳ್ಳಿರಥದಲ್ಲಿ ಚೌಡೇಶ್ವರಿ ಅಮ್ಮನ ಉತ್ಸವ ಮೂರ್ತಿಯನ್ನು, ಕುಂಭಮೇಳ, ದೀಪಾಲಂಕಾರ ಹಾಗೂ ಭಜನಾ ಮೇಳದೊಂದಿಗೆ ದೇವಿಯ ಸನ್ನಿಧಾನಕ್ಕೆ ಕರೆತರಲಾಯಿತು. ಬಳಿಕ ವಿಶೇಷ ಮಂಗಳಾರತಿ ಪೂಜೆ ನೆರವೇರಿಸಿ, ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ಮಂಗಳವಾರ ಬೆಳಿಗ್ಗೆಯಿಂದ ಹೋಮ–ಹವನ, ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಹರಕೆ ಸಲ್ಲಿಸಿದರು.

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ಸೇವಾ ಟ್ರಸ್ಟ್ ವತಿಯಿಂದ ವ್ಯವಸ್ಥಿತವಾಗಿ, ಸ್ವಚ್ಛತೆ ಹಾಗೂ ಶಿಸ್ತಿನೊಂದಿಗೆ ತಯಾರಿಸಿದ ರುಚಿಕರ ಭೋಜನವನ್ನು ಭಕ್ತರು ಸವಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ವ್ಯಾಪಾರಿಗಳು ಜಾತ್ರೆಗೆ ಬಂದಿದ್ದು, ಸುತ್ತಲಿನ ಹಳ್ಳಿಗಳ ಜನರು ಅಗತ್ಯ ವಸ್ತುಗಳು, ಸಿಹಿ ತಿಂಡಿ  ಹಾಗೂ ಮಕ್ಕಳ ಆಟಿಕೆಗಳನ್ನು ಖರೀದಿಸಲು ಜಾತ್ರಾ ಮೈದಾನದಲ್ಲಿ ಮುಗಿಬಿದ್ದರು.

ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.