ADVERTISEMENT

ಅನಧಿಕೃತ ಮಕ್ಕಳ ದತ್ತು ಅಪರಾಧ: ಸಮಾಲೋಚನಾ ಸಭೆಯಲ್ಲಿ ದಿಲೀಪ್

ದತ್ತು ಪೋಷಕರು, ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ದಿಲೀಪ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:09 IST
Last Updated 4 ನವೆಂಬರ್ 2025, 5:09 IST
ಹಾಸನದ ಬಾಲಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದತ್ತು ಪ್ರಕ್ರಿಯೆ ಕುರಿತಾದ ಕಿರುಪತ್ರಗಳನ್ನು ಬಿಡುಗಡೆ ಮಾಡಲಾಯಿತು 
ಹಾಸನದ ಬಾಲಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದತ್ತು ಪ್ರಕ್ರಿಯೆ ಕುರಿತಾದ ಕಿರುಪತ್ರಗಳನ್ನು ಬಿಡುಗಡೆ ಮಾಡಲಾಯಿತು    

ಹಾಸನ: ರಾಜ್ಯದಲ್ಲಿ ದತ್ತು ಯೋಜನೆಯನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ವಹಿಸುತ್ತಿದ್ದು, ಮಕ್ಕಳನ್ನು ದತ್ತು ಪಡೆಯುವ ಆಸಕ್ತಿ ಇರುವ ದಂಪತಿ ಅಥವಾ ಏಕ ಪೋಷಕರು ಕಾನೂನು ಬದ್ಧವಾಗಿಯೇ ದತ್ತು ಪಡೆಯಲು ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ. ದಿಲೀಪ್ ತಿಳಿಸಿದರು.

ಅಂತರ ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ನಗರದ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿ ಆಯೋಜಿಸಿದ್ದ ದತ್ತು ಪೋಷಕರು ಮತ್ತು ಅಧಿಕಾರಿಗಳ ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಆಸ್ಪತ್ರೆಗಳು, ಮಧ್ಯವರ್ತಿಗಳು ಅಥವಾ ಇನ್ಯಾವುದೇ ರೂಪದಲ್ಲಿ ಅನಧಿಕೃತವಾಗಿ ದತ್ತು ಪಡೆದರೆ ಇದರಿಂದ ಸಮಸ್ಯೆ ಎದುರಾಗುತ್ತದೆ. ಅನಧಿಕೃತ ದತ್ತು ಆಗುವುದಿಲ್ಲ. ನಿಮ್ಮ ಸ್ವತ್ತು, ಅನಧಿಕೃತವಾಗಿ ಮಕ್ಕಳನ್ನು ಮಾರುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ಬಾಲ ನ್ಯಾಯ ಕಾಯ್ದೆ ಅನ್ವಯ ಐದು ವರ್ಷಗಳವರೆಗೂ ಜೈಲು ಶಿಕ್ಷೆ, ₹ 1 ಲಕ್ಷ ದಂಡ ವಿಧಿಸಲಾಗುತ್ತದೆ. ಈ ಕೃತ್ಯಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಅಥವಾ ವೈದ್ಯರು ಭಾಗಿಯಾದಲ್ಲಿ ಶಿಕ್ಷೆಯ ಅವಧಿ ಏಳು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಕಾನೂನು ಬದ್ಧವಾಗಿಯೇ ದತ್ತು ಪಡೆಯುವಂತೆ ಸಲಹೆ ನೀಡಿದರು.

ADVERTISEMENT

ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆಯು ಕುಟುಂಬದ ಪ್ರೀತಿ ವಂಚಿತ ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಕಾರ್ಯಕ್ರಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಧುಕುಮಾರಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ದತ್ತು ಯೋಜನೆ ಅನುಷ್ಠಾನಗೊಳಿಸಲು ಕಾಮಧೇನು ಸಹಕಾರಿ ವಿದ್ಯಾಶ್ರಮ ಹಾಗೂ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಶ್ರಮಿಸುತ್ತಿವೆ. ಪೋಷಕರು ಮಕ್ಕಳ ದತ್ತು ಪಡೆಯಬೇಕು ಎಂದು ಇಷ್ಟಪಟ್ಟಲ್ಲಿ ಮಧ್ಯವರ್ತಿಗಳ ಆಸೆ, ಆಮಿಷಗಳಿಗೆ ಬಲಿಯಾಗದೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿಶೇಷ ದತ್ತು ಸಂಸ್ಥೆಗಳ ಮೂಲಕ ಸೂಕ್ತ ಮಾಹಿತಿ ಪಡೆದು ನಿಯಮಾನಸಾರ ದತ್ತು ಪಡೆಯುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ದತ್ತು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದ್ದು, ನೂರಾರು ಮಕ್ಕಳನ್ನು ಎರಡೂ ದತ್ತು ಸಂಸ್ಥೆಗಳ ಮೂಲಕ ದತ್ತು ನೀಡಲಾಗಿದೆ. ದತ್ತು ಯೋಜನೆಯ ಅನುಷ್ಠಾನಕ್ಕೆ ಮಕ್ಕಳ ಕಲ್ಯಾಣ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದತ್ತು ಮುಕ್ತ ಆದೇಶ ನೀಡುವುದು, ಮಕ್ಕಳಿಗೆ ಪರ್ಯಾಯ ಕುಟುಂಬ ಹುಡುಕುವುದು, ಪೋಷಕತ್ವ ಯೋಜನೆ ಜಾರಿಗೊಳಿಸುವುದು, ಮಕ್ಕಳಿಗೆ ಸೂಕ್ತ ಪುನರ್ವಸತಿಯನ್ನ ಕಲ್ಪಿಸಲು ಶ್ರಮಿಸುತ್ತಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಉಮಾಶ್ರೀ ರವಿ, ರಂಗಸ್ವಾಮಿ, ಬಾಲ ಮಂದಿರದ ಸಿಬ್ಬಂದಿ ರುಬಿನ, ಆಷಾರಾಣಿ, ಆರಕ್ಷಕ ಅಧಿಕಾರಿ ಶೋಭಾ ಮುಂತಾದವರು ಹಾಜರಿದ್ದರು.

ಅನಧಿಕೃತ ದತ್ತು ಪತ್ತೆಗೆ ಕಾರ್ಯಾಚರಣೆ

ನವೆಂಬರ್‌ನಲ್ಲಿ ಅಂತರ ರಾಷ್ಟ್ರೀಯ ದತ್ತು ಮಾಸಾಚರಣೆ ಆಚರಿಸಲಾಗುತ್ತಿದ್ದು ಕಾನೂನು ಬದ್ಧ ದತ್ತು ಉತ್ತೇಜನ ನೀಡಲು ಹಾಗೂ ಕಾನೂನುಬಾಹಿರವಾಗಿ ದತ್ತು ಪಡೆಯುವ ಪ್ರಕರಣಗಳ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಕಾಂತರಾಜು ಹೇಳಿದರು. ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಅನಾಥ ಪರಿತ್ಯಕ್ತ ಮಕ್ಕಳನ್ನು ದೀರ್ಘಕಾಲದಿಂದ ನೋಡಲು ಬಾರದಿರುವ ಪಾಲಕರ ಕುರಿತು ಹಾಗೂ ಮಕ್ಕಳ ಪಾಲಕರು ಮಕ್ಕಳನ್ನು ನೋಡಿಕೊಳ್ಳಲು ಅಸಮರ್ಥರಿದ್ದ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಮಾಡಿಸಲಾಗುತ್ತದೆ. ಬಳಿಕ ಅಂತರ್ಜಾಲ ತಾಣದಲ್ಲಿ ನೋಂದಾಯಿಸಿರುವ ಅರ್ಹ ದಂಪತಿಗಳಿಗೆ ಮಕ್ಕಳನ್ನು ದತ್ತು ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.