
ಹಾಸನ: ಕ್ರಿಸ್ಮಸ್ ಹಬ್ಬಕ್ಕೆ ಒಂದು ದಿನ ರಜೆ ಕುರಿತು ಸರ್ಕಾರದ ಆದೇಶವಿದ್ದು, ಹೆಚ್ಚಿನ ರಜೆ ನೀಡಿದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ಸದಸ್ಯರು, ಶಾಲಾ ಶಿಕ್ಷಣ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿ ಡಿಡಿಪಿಐ ಬಲರಾಂ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶ್ರೀರಾಮ ಸೇನಾ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಜಾನೇಕೆರೆ ಹೇಮಂತ್ ಮಾತನಾಡಿ, ಸರ್ಕಾರದ ಅಧಿಸೂಚನೆಯಂತೆ ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳು, ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ-ಕಾಲೇಜುಗಳು ನಿಗದಿಯಂತೆ ಒಂದು ದಿನ ಮಾತ್ರ ರಜೆ ಘೋಷಿಸಬೇಕು ಎಂದರು.
ಆದರೆ ಕೆಲವು ಖಾಸಗಿ ಶಾಲೆಗಳು, ವಿಶೇಷವಾಗಿ ಕ್ರಿಶ್ಚಿಯನ್ ಆಡಳಿತದಲ್ಲಿರುವ ಸಂಸ್ಥೆಗಳು, ಸರ್ಕಾರದ ರಜೆ ಆದೇಶವನ್ನು ಉಲ್ಲಂಘಿಸುತ್ತಿದ್ದು, ದಸರಾ ರಜೆ ರದ್ದು ಮಾಡಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿರುವುದು ಖಂಡನೀಯ ಎಂದರು.
ಡಿಸೆಂಬರ್ 25 ಕ್ರಿಸ್ಮಸ್ ಹಬ್ಬಕ್ಕೆ ಸರ್ಕಾರ ಅಧಿಕೃತವಾಗಿ ಒಂದು ದಿನ ಮಾತ್ರ ರಜೆ ಘೋಷಿಸಿದೆ. ಆದರೆ ಅನಧಿಕೃತವಾಗಿ ಕೆಲವು ಕ್ರಿಶ್ಚಿಯನ್ ನಿರ್ವಹಣೆಯ ಶಾಲೆಗಳು 10 ದಿನಗಳವರೆಗೆ ರಜೆ ಘೋಷಿಸುತ್ತಿರುವುದು ಸಂಪೂರ್ಣವಾಗಿ ಕಾನೂನು ಬಾಹಿರ. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಈ ಶಾಲೆಗಳಲ್ಲಿ ಶೇ 99ರಷ್ಟು ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಿಂದೂ ಸಮುದಾಯದವರಿದ್ದರೂ, ಕ್ರಿಶ್ಚಿಯನ್ ಧಾರ್ಮಿಕ ಆಚರಣೆಗಳನ್ನು ಬಲವಂತವಾಗಿ ಹೇರಲು ಪ್ರಯತ್ನಿಸುವುದು ಧಾರ್ಮಿಕ, ಸಾಂಸ್ಕೃತಿಕ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಇದು ಸಂವಿಧಾನದ ಉಲ್ಲಂಘನೆ ಆಗಲಿದೆ. ಸರ್ಕಾರದ ರಜೆ ನಿಯಮಗಳನ್ನು ಉಲ್ಲಂಘಿಸಿರುವ ಎಲ್ಲ ಸಂಸ್ಥೆಗಳ ಮೇಲೆ ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶ್ರೀರಾಮಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮ ನಾಯಕ, ಉಪಾಧ್ಯಕ್ಷ ಪ್ರದೀಪ್, ನಗರ ಘಟಕದ ಅಧ್ಯಕ್ಷ ದರ್ಶನ್, ಜಗದೀಶ್, ವಿನಯ್, ಅಜಿತ್, ದೊರೆಸ್ವಾಮಿ, ಬಸವರಾಜು, ಮಹೇಶ್ ಬಾಗಲಕೋಟೆ, ಪ್ರವೀಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.