ಹಾಸನ: ರಾಜ್ಯದಲ್ಲಿ ತೆಂಗು ಬೆಳೆಗೆ ರೋಗಬಾಧೆ ಉಲ್ಬಣಿಸಿದೆ. ತೆಂಗು ಬೆಳೆಯುವ ಒಟ್ಟು 5.65 ಲಕ್ಷ ಹೆಕ್ಟೇರ್‌ನಲ್ಲಿ 4.73 ಲಕ್ಷ ಹೆಕ್ಟೇರ್ ತೆಂಗು ಬೆಳೆ ರೋಗ ಬಾಧೆಯಿಂದ ನಲುಗುತ್ತಿದೆ.
ತೆಂಗು ಬೆಳೆ ರೋಗಬಾಧೆಯ ಕುರಿತು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಬುಧವಾರ ವಿಧಾನ ಮಂಡಲದ ಅಧಿವೇಶನದಲ್ಲಿ ನಿಯಮ 73ರ ಅಡಿಯಲ್ಲಿ ಕೇಳಿರುವ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೀಡಿರುವ ಉತ್ತರದಿಂದ ಇದು ಬಹಿರಂಗವಾಗಿದೆ.
ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದಲ್ಲಿ 5.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 24.76 ಲಕ್ಷ ಟನ್ ಉತ್ಪಾದನೆ ಇದೆ.
ಸೊರಗು ರೋಗ, ಬೆಂಕಿ ರೋಗ, ಹರಳು ಉದುರುವ ರೋಗ, ಕಪ್ಪು ತಲೆ ಹುಳುವಿನ ಬಾಧೆ ಹಾಗೂ ಬಿಳಿನೊಣದ ಬಾಧೆಯಿಂದ 4.73 ಲಕ್ಷ ಹೆಕ್ಟೇರ್ ತೆಂಗು ಬೆಳೆ ಸೊರಗುತ್ತಿದೆ.
ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಲು ಬೆಳೆ ಸಮೀಕ್ಷೆ ಮಾದರಿಯಂತೆ ಪ್ರತ್ಯೇಕ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ.
ಕಪ್ಪು ತಲೆ ಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ, ಇಲಾಖೆಯ 23 ಪ್ರಯೋಗಾಲಯಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಶಿಲೀಂಧ್ರನಾಶಕ ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ.
2024-25ನೇ ಸಾಲಿನಲ್ಲಿ ₹ 1.40 ಕೋಟಿ ಅನುದಾನದಲ್ಲಿ 3.28 ಕೋಟಿ ಪರೋಪ ಜೀವಿಗಳನ್ನು ಉತ್ಪಾದಿಸಿ 6,969 ಫಲಾನುಭವಿಗಳಿಗೆ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹ 1.40 ಕೋಟಿ ಅನುದಾನ ನಿಗದಿಯಾಗಿದ್ದು, ಪರೋಪಜೀವಿ ಹಾಗೂ ಐಸಿರಿಯಾ ಜೈವಿಕ ಶಿಲೀಂಧ್ರ ನಾಶಕ ಉತ್ಪಾದಿಸಿ ಉಚಿತವಾಗಿ ವಿತರಿಸಲು ಇಲಾಖೆ ಮುಂದಾಗಿದೆ.
ಹಾಸನವೂ ಸೇರಿದಂತೆ ರಾಜ್ಯದಲ್ಲಿ ತೆಂಗು ಬೆಳೆ ರೋಗಬಾಧೆ ಹೆಚ್ಚಾಗುತ್ತಿದ್ದು ತೆಂಗು ಇಳುವರಿ ಗಣನೀಯವಾಗಿ ಕುಂಠಿತವಾಗುತ್ತಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆಸಿ.ಎನ್. ಬಾಲಕೃಷ್ಣ ಶ್ರವಣಬೆಳಗೊಳ ಕ್ಷೇತ್ರದ ಶಾಸಕ
ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಗೋನಿಯೋಜಸ್ ಪರೋಪಜೀವಿ ಉತ್ಪಾದಿಸಿ ಉಚಿತವಾಗಿ ವಿತರಿಸಲು ₹ 50 ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ.ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.