ADVERTISEMENT

ಅರಸೀಕೆರೆ: ತೆಂಗು ಕಾಯಕಲ್ಪ ರಥಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 1:56 IST
Last Updated 17 ಸೆಪ್ಟೆಂಬರ್ 2025, 1:56 IST
ಅರಸೀಕೆರೆ ತಾಲ್ಲೂಕಿನ ನಾಗತಿಹಳ್ಳಿಯ ತೆಂಗಿನ ತೋಟದಲ್ಲಿ ಉಲ್ಬಣವಾಗಿರುವ ರೋಗ ಹತೋಟಿಗಾಗಿ ಪರೋಪ ಜೀವಿಗಳನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಬಿಡುಗೊಡೆಗೊಳಿಸಿದರು
ಅರಸೀಕೆರೆ ತಾಲ್ಲೂಕಿನ ನಾಗತಿಹಳ್ಳಿಯ ತೆಂಗಿನ ತೋಟದಲ್ಲಿ ಉಲ್ಬಣವಾಗಿರುವ ರೋಗ ಹತೋಟಿಗಾಗಿ ಪರೋಪ ಜೀವಿಗಳನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಬಿಡುಗೊಡೆಗೊಳಿಸಿದರು   

ಅರಸೀಕೆರೆ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ರೋಗ ಬಾಧೆಯಿಂದ ಕ್ಷೀಣಿಸುತ್ತಿದ್ದು, ನಿಯಂತ್ರಣ ಸಂಬಂಧ ಸೂಕ್ತ ಮಾಹಿತಿಯನ್ನು ರೈತರಿಗೆ ತಿಳಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ತೆಂಗು ಕಾಯಕಲ್ಪ ರಥಯಾತ್ರೆ ಸಂಚರಿಸಲಿದೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಕಾಯಕಲ್ಪ ರಥಯಾತ್ರೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

‘ಇಂದಿನಿಂದ 15 ದಿನಗಳವರೆಗೆ ರಥಯಾತ್ರೆ ತಾಲ್ಲೂಕಿನಲ್ಲಿ ಸಂಚರಿಸಲಿದ್ದು, ವಿಶೇಷವಾಗಿ ತೆಂಗು ಬೆಳೆಯಲ್ಲಿ ಕಂಡುಬರುವ ರೋಗದ ಕೀಟಗಳು ಹಾಗೂ ಉತ್ತಮ ಬೇಸಾಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಎಲ್ಲಾ ರೈತರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ತೆಂಗಿನಲ್ಲಿ ಕಾಣಿಸಿಕೊಂಡಿರುವ ಬಿಳಿ ನೊಣ, ಕಪ್ಪು ತಲೆಹುಳ, ಹಣಬೆ ರೋಗ ಹಾಗೂ ಕಾಂಡ ಸೋರುವ ರೋಗಗಳು ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿವೆ’ ಎಂದರು.

ADVERTISEMENT

‘ಉತ್ತಮ ತೆಂಗು ಬೇಸಾಯದ ಬಗ್ಗೆ ಪ್ರಚಾರ ಮಾಡಲು ಹಾಗೂ ಕಪ್ಪು ತಲೆ ಹುಳು ಬಾಧಿತ ತೋಟಗಳಿಗೆ ಗೋನಿಯೋಜಸ್ ಪರೋಪ ಜೀವಿಯನ್ನು ಹಾಗೂ ಕಾಂಡಸೋರುವ ರೋಗ ನಾಶಕಗಳನ್ನು ಸಹ ವಿತರಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಪ್ರತಿ ಹಳ್ಳಿಗಳಲ್ಲಿ ಕರಪತ್ರ ಹಂಚಲಾಗುವುದು, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಲಾಗಿದೆ. ತೆಂಗಿನಲ್ಲಿ ಕಂಡುಬರುವ ಕೀಟ ಮತ್ತು ರೋಗಗಳನ್ನು ಸಮರೋಪಾದಿಯಲ್ಲಿ ಎಲ್ಲ ರೈತರು ಹತೋಟಿಗೆ ತಂದಾಗ ಮಾತ್ರ ಬೆಳೆಯಲ್ಲಿ ಪ್ರಗತಿ ಕಾಣಲು ಸಾಧ್ಯ’ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ, ಉಪ ನಿರ್ದೇಶಕ ಯೋಗೇಶ್‌ ಮಾತನಾಡಿದರು.

ತೆಂಗು ಸಂಶೋಧನಾ ಕೇಂದ್ರ ಮುಖ್ಯಸ್ಥ ಕಾಂತರಾಜು, ವಿಷಯ ತಜ್ಞ ಡಾ. ಜಗದೀಶ್, ಸಹಾಯಕ ನಿರ್ದೇಶಕ ಶಿವಕುಮಾರ್, ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.