ADVERTISEMENT

ಚನ್ನರಾಯಪಟ್ಟಣ: ತೆಂಗು ಕಾಯಕಲ್ಪ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:42 IST
Last Updated 22 ಸೆಪ್ಟೆಂಬರ್ 2025, 5:42 IST
ಚನ್ನರಾಯಪಟ್ಟಣದಲ್ಲಿ ಶುಕ್ರವಾರ ತೆಂಗು ಕಾಯಕಲ್ಪ ರಥಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ಯೋಗೀಶ್, ಮಂಜುನಾಥ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಶುಕ್ರವಾರ ತೆಂಗು ಕಾಯಕಲ್ಪ ರಥಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ಯೋಗೀಶ್, ಮಂಜುನಾಥ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇದನ್ನು ಸಂರಕ್ಷಿಸುವ ದೃಷ್ಟಿಯಿಂದ ತಾಲ್ಲೂಕಿನಲ್ಲಿ ತೆಂಗು ಕಾಯಕಲ್ಪ ರಥ ಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತೋಟಗಾರಿಕೆ ಇಲಾಖೆವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತೆಂಗು ಕಾಯಕಲ್ಪ ರಥದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ತೆಂಗು ರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ. ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಶೇ 60ರಷ್ಟು ಪ್ರಮಾಣದಲ್ಲಿ ತೆಂಗು ಬೆಳೆ ಇದೆ. ಇನ್ನುಳಿದಂತೆ ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನ 480 ಹಳ್ಳಿಗಳಲ್ಲಿ ರಥಯಾತ್ರೆ ಸಂಚರಿಸಲಿದ್ದು, ಅಂಗನವಾಡಿ, ಗ್ರಾಮಪಂಚಾಯಿತಿಗಳಲ್ಲಿ ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

‘ತೆಂಗು ಮತ್ತು ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಂಡಿದ್ದು, ಕಲ್ಪವೃಕ್ಷ ಮತ್ತು ಕಾಮಧೇನು ನಂಬಿ ಬದುಕುತ್ತಿದ್ದಾರೆ. ತಾಲ್ಲೂಕಿನಲ್ಲಿ ತೆಂಗು ಬೆಳೆಗಳಿಗೆ ರೋಗಬಾಧೆ ಇದೆ. ಕಪ್ಪುತಲೆ, ಕಾಂಡ, ಸುಳಿ, ನುಸಿ ರೋಗದಿಂದ ತೆಂಗುಬೆಳೆ ತತ್ತರಿಸುತ್ತಿದೆ. ಇದರ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಅಡಿಕೆ ಬೆಳೆಯ ಚುಕ್ಕಿ ರೋಗಕ್ಕೆ ಮಾತ್ರ ಸರ್ಕಾರ ₹65 ಕೋಟಿ ಪರಿಹಾರ ಘೋಷಣೆ ಮಾಡಿದೆ. ಆದರೆ ತೆಂಗು ಬೆಳೆಗೆ ತಗುಲಿರುವ ರೋಗದ ಬಗ್ಗೆ ಸಮೀಕ್ಷೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಲಾಗಿದೆ. ಸಮೀಕ್ಷೆ ನಡೆಸಿ ಪರಿಹಾರ ನೀಡುವಂತಾಗಬೇಕು. 12 ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ 2,26, 500 ತೆಂಗಿನ ತಾಕುಗಳಿದ್ದು, 1,32, 722 ತಾಕುಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ತೆಂಗು ಬೆಳೆಗೆ ತಗುಲಿರುವ ರೋಗ ನಿವಾರಿಸಲು ಉಚಿತವಾಗಿ ಔಷಧ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.