ADVERTISEMENT

ಸಕಲೇಶಪುರ| ಕಾಫಿ ಸಂಸ್ಕೃತಿ ವಿಚಾರ ಸಂಕಿರಣ ಜ. 16ರಂದು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:06 IST
Last Updated 15 ಜನವರಿ 2026, 6:06 IST
ಕೊಯ್ಲು ಮಾಡಿರುವ ಕಾಫಿ ಹಣ್ಣು
ಕೊಯ್ಲು ಮಾಡಿರುವ ಕಾಫಿ ಹಣ್ಣು   

ಸಕಲೇಶಪುರ: ಸೆವೆನ್‌ ಬೀನ್‌ ಸಂಸ್ಥೆಯಿಂದ ಕಾಫಿ ಸಂಸ್ಕೃತಿ ವಿಚಾರ ಸಂಕಿರಣವನ್ನು ಜ.16ರಂದು ಇಲ್ಲಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎನ್‌.ಕೆ.ಪ್ರದೀಪ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ರಿಂದ ಕಾಫಿ ಸಂಸ್ಕೃತಿ ಸಂಬಂಧ ವಿಚಾರ ಸಂಕಿರಣ ನಡೆಸಲಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಜ್ಞಾನದ ಜೊತೆಗೆ, ವಿಜ್ಞಾನ ಬಳಸಿಕೊಂಡು ಲಾಭದಾಯಕ ಹಾಗೂ ವಿಷಮುಕ್ತ ಕೃಷಿ ಬಗ್ಗೆ ರೈತರು, ಬೆಳೆಗಾರರಿಗೆ ಹೆಚ್ಚಿನ ಮಾಹಿತಿ ನೀಡುವುದು ಇದರ ಮುಖ್ಯ ಉದ್ದೇಶ ಎಂದರು.

ಕೃಷಿಯಲ್ಲಿ ಯುವಕರನ್ನು ಆಕರ್ಷಿಸುವುದು, ಕಾಫಿಯಲ್ಲಿ ಮೌಲ್ಯವರ್ಧನೆ ಮೂಲಕ ಉತ್ತಮ ಬೆಲೆ ಪಡೆಯುವುದು, ಅಪಾಯಕಾರಿ ರಾಸಾಯನಿಕಗಳ ಬಳಕೆಯಿಂದ ಪ್ರಕೃತಿ, ಮಣ್ಣು, ಅಂತರ್ಜಲ ಹಾಗೂ ಆಹಾರದ ಗುಣಮಟ್ಟಕ್ಕೆ ಆಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಾಗಾರದ ಪ್ರಮುಖ ಗುರಿ ಎಂದರು.

ADVERTISEMENT

ಗೊಬ್ಬರಗಳ ಸದ್ಬಳಕೆ, ಯೂರಿಯಾ ಹಾಗೂ ಎಂಒಪಿ ಅಧಿಕ ಬಳಕೆಯಿಂದ ಉಂಟಾಗುವ ಸಮಸ್ಯೆಗಳು, ಅದರ ಪರ್ಯಾಯವಾಗಿ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಪದ್ಧತಿ ಅಳವಡಿಸಿಕೊಳ್ಳುವ ಕುರಿತು ತಜ್ಞರು, ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಲಾಭದಾಯಕ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿಯ ಜೊತೆಗೆ ವಿಷಮುಕ್ತ ಆಹಾರ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ವಿಚಾರ ಸಂಕಿರಣ, ಕಾಫಿ ಸಂಸ್ಕೃತಿ – ಕಾಫಿ ಪರಂಪರೆಯಲ್ಲಿ ವಿಜ್ಞಾನದ ಸಂಚಲನ ವಿಷಯದಡಿ ಇಡೀ ದಿನ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಕಾಫಿ ಮಂಡಳಿ ಸಿಇಒ ಕುರ್ಮಾರಾವ್‌, ಏಷ್ಯಾದ ಮೊದಲ ಕಪ್‌ ಟೇಸ್ಟರ್ ಸುನಾಲಿನಿ, ಎಸ್‌ಸಿಎಐ ಮಾಜಿ ಅಧ್ಯಕ್ಷ ಡಿ.ಎಂ. ಪೂರ್ಣೇಶ್‌, ಬಾಳೆಹೊನ್ನೂರು ಐಸಿಎಆರ್‌ ವಿಜ್ಞಾನಿ ಡಾ. ವೇಣುಗೋಪಾಲ್ ಭಾಗವಹಿಸಲಿದ್ದಾರೆ. ಕಾಫಿ ಜೊತೆಗೆ ಕಾಳುಮೆಣಸು, ಏಲಕ್ಕಿ, ಅಡಿಕೆ ಮುಂತಾದ ಅಂತರ ಬೆಳೆಗಳ ಮಾಹಿತಿಯನ್ನು ಸೆವೆನ್‌ ಬೀನ್‌ ಟೀಮ್‌ ಚೇರ್ಮನ್‌ ಹೊಂಕರವಳ್ಳಿ ಧರ್ಮರಾಜ್‌ ಮಾಹಿತಿ ನೀಡಲಿದ್ದಾರೆ. ಕೃಷಿ ತಂತ್ರಜ್ಞಾನ, ಯಂತ್ರೋಪಕರಣಗಳು, ಹೊಸ ಗೊಬ್ಬರ, ಡ್ರೈಯರ್ಸ್ ಸೇರಿದಂತೆ ಸುಮಾರು 20ಕ್ಕೂ ಹೆಚ್ದು ಪ್ರದರ್ಶನದ ಮಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಸ್ಥೆಯ ಚೇರ್ಮೆನ್‌ ಧರ್ಮರಾಜ್, ಕ್ಯಾನಹಳ್ಳಿ ಸುಬ್ರಹ್ಮಣ್ಯ, ಸಿ.ಎಸ್‌. ಮಹೇಶ್, ದಿಲೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.