ಹಾಸನ: ‘ವಿಪರೀತ ಮಳೆಯಿಂದಾಗಿ ಕಾಫಿ ಬೆಳೆ ಸಂಪೂರ್ಣ ಹಾನಿಯಾಗುತ್ತಿದ್ದು, ಸರ್ಕಾರ ಕೂಡಲೇ ಅಗತ್ಯ ಪರಿಹಾರ ಘೋಷಣೆ ಮಾಡಬೇಕು’ ಎಂದು ಕರ್ನಾಟಕ ಕಾಫಿ ಬೆಳಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒಂದು ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ತೇವಾಂಶ ಹೆಚ್ಚಾಗಿದ್ದು, ಕಾಫಿ ಮತ್ತು ಕಾಳು ಮೆಣಸು ಬೆಳೆ ಸಂಪೂರ್ಣ ನಾಶವಾಗುವ ಹಂತ ತಲುಪುತ್ತಿದೆ. ಕಾಫಿ ಬೆಳೆಗೆ ಕೊಳೆರೋಗ ಆವರಿಸುತ್ತಿದ್ದು, ಗಿಡದಿಂದ ಕಾಯಿ ಉದುರುತ್ತಿದೆ’ ಎಂದರು.
ಕಳೆದ ಬಾರಿ ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗಿ ಹಾನಿ ಸಂಭವಿಸಿತ್ತು. ಇದೀಗ ನಿರಂತರ ಮಳೆಯಿಂದಾಗಿ ಶೇ 60ರಷ್ಟು ಕಾಫಿ ಬೆಳೆ ನಷ್ಟ ಸಂಭವಿಸುವ ಆತಂಕ ಎದುರಾಗಿದೆ. ವಿಪರೀತ ಗಾಳಿ, ಮಳೆಯಿಂದ ತೋಟದಲ್ಲಿ ಮರಗಳು ಸಹ ನೆಲ ಕಚ್ಚುತ್ತಿದೆ. ಕಾಫಿ ಜೊತೆಗೆ ಕಾಳುಮೆಣಸಿಗೂ ಕೊಳೆರೋಗ ಆವರಿಸುತ್ತಿದೆ. ಸಾಲು ಸಾಲು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
‘ಕಾಫಿ ಬಹು ವಾರ್ಷಿಕ ಬೆಳೆಯಾಗಿದ್ದರೂ, ಈ ಬೆಳೆಗೆ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಕಾರ್ಮಿಕರ ಸಮಸ್ಯೆ ಜೊತೆಗೆ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಬೆಳೆಗಾರರ ರಕ್ಷಣೆಗೆ ಸರ್ಕಾರ ಬರಬೇಕಿದೆ’ ಎಂದು ಒತ್ತಾಯಿಸಿದರು.
‘ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಏರಿಕೆ ಮಾಡಬೇಕು. ಕಳೆದ ವರ್ಷ ಕಾಫಿ ಬೆಳೆಗಾರರಿಗೆ ಯಾವುದೇ ಪರಿಹಾರ ದೊರಕಿಲ್ಲ. ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಬೆಳೆಗಾರರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಧಿಯಿಂದ 5 ಎಕರೆಗೆ ಮಿತಿಗೊಳಿಸಿ ನೀಡಲಾಗುತ್ತಿರುವ ಪರಿಹಾರವನ್ನು 25 ಎಕರೆಯವರೆಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.
ಒಕ್ಕೂಟದ ನಾಗರಾಜ್, ಕೆ.ಬಿ.ಕೃಷ್ಣಪ್ಪ, ಯತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.