
ಬೇಲೂರು: ತಾಲ್ಲೂಕಿನ ಅರೇಹಳ್ಳಿಯ ಉಲ್ಲಾಸ ನಗರದಲ್ಲಿ ಕಣದಲ್ಲಿ ಒಣಗಲು ಹಾಕಿ ಕಾಫಿ ಕಾಯುತ್ತಿದ್ದ ಜಗನ್ನಾಥ ಶೆಟ್ಟಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಕಳ್ಳರು, ಕಾಫಿ ಬೀಜಗಳನ್ನು ಕಳವು ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಫಿ ಕಳ್ಳತನ ಹೆಚ್ಚಾಗಿದ್ದು, ಕಾಫಿ ಬೆಳೆಗಾರ ಜಗನ್ನಾಥ ಶೆಟ್ಟಿ, ತಮ್ಮ ಕಣದಲ್ಲಿ 25 ಚೀಲದಷ್ಟು ಕಾಫಿ ಬೀಜಗಳನ್ನು ಒಣಗಲು ಹಾಕಿದ್ದರು. ಬೀಜಗಳನ್ನು ಕಾಯುವ ಉದ್ದೇಶದಿಂದ ತಮ್ಮ ಆಮ್ನಿ ಕಾರಿನಲ್ಲಿ ಮಲಗುತ್ತಿದ್ದರು. ಗುರುವಾರ ಬೆಳಿಗ್ಗೆ 4ರಿಂದ 5ರ ವೇಳೆ ನಾಲ್ಕು ಜನರಿದ್ದ ತಂಡದಲ್ಲಿದ್ದ ಇಬ್ಬರು ಕಣದಲ್ಲಿ ಕಾಫಿ ಬೀಜಗಳನ್ನು ಎರಡು ಚೀಲಗಳಿಗೆ ತುಂಬುತಿದ್ದರು. ಶಬ್ದ ಬಂದಂತಾಗಿ ಎಚ್ಚೆತ್ತ ಜಗನ್ನಾಥ ಶೆಟ್ಟಿ, ಡಬಲ್ ಬ್ಯಾರೆಲ್ ಬಂದೂಕಿನೊಂದಿಗೆ ಕಾರಿನಿಂದ ಕೆಳಗಿಳಿದು ಜೋರಾಗಿ ಕೂಗಾಡಲು ಮುಂದಾಗಿದ್ದಾರೆ.
ನಾಲ್ಕು ಜನರ ಪೈಕಿ ಮತ್ತಿಬ್ಬರು ಕಾರಿನ ಹಿಂಬದಿಯಿಂದ ಜಗನ್ನಾಥ್ ಶೆಟ್ಟಿಯವರ ತಲೆ, ಕೈ ಮತ್ತು ಪಕ್ಕೆಗೆ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ನಂತರ ಕಳ್ಳರು ಉರ್ದು ಭಾಷೆಯಲ್ಲಿ ‘ಇವನನ್ನು ಬಿಡಬಾರದು’ ಎಂದು ಮಾತನಾಡಿಕೊಂಡು, ಕಣದಲ್ಲಿದ್ದ ಕಾಫಿ ಬೀಜವನ್ನೆಲ್ಲ ತುಂಬಿಕೊಂಡು ಪಕ್ಕದ ತೋಟದೊಳಕ್ಕೆ ಹೋಗಿದ್ದಾರೆ.
ಕೂಗಾಟ ಕೇಳಿದ ಅಕ್ಕಪಕ್ಕದವರು ಬಂದು ಗಾಯಗೊಂಡಿದ್ದ ಜಗನ್ನಾಥ್ ಶೆಟ್ಟಿ ಅವರನ್ನು ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೇತಾ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಮತ್ತು ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.