ADVERTISEMENT

ಮತ ವಿಭಜನೆ ತಡೆಯುವಲ್ಲಿ ಪ್ರಮುಖ ಪಾತ್ರ

ಬಿಜೆಪಿ ಸೋಲಿಸಲು ಎಡಪಂಥೀಯ ಶಕ್ತಿಗಳ ಜೊತೆ ಮೈತ್ರಿ: ಬಿನೋಯ್‌ ವಿಶ್ವಂ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:28 IST
Last Updated 27 ಸೆಪ್ಟೆಂಬರ್ 2022, 6:28 IST
ಬಿನೋಯ್‌ ವಿಶ್ವಂ
ಬಿನೋಯ್‌ ವಿಶ್ವಂ   

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆಯೂ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಎಡಪಂಥೀಯ ಶಕ್ತಿಗಳ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿಪಿಐ ಮುಕ್ತ ಮನಸ್ಸು ಹೊಂದಿದೆ ಎಂದು ರಾಜ್ಯಸಭಾ ಸದಸ್ಯ ಬಿನೋಯ್‌ ವಿಶ್ವಂ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಸಿಪಿಐ 24 ನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿರುವ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಸಿಪಿಐಗೆ ಅಷ್ಟೊಂದು ಶಕ್ತಿ ಇಲ್ಲ. ಆದರೆ, ಬಿಜೆಪಿ ಅನುಕೂಲ ಆಗುವಂತೆ ಮತಗಳ ವಿಭಜನೆ ಆಗುವುದನ್ನು ತಡೆಯುವಲ್ಲಿ ನಾವು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.

ADVERTISEMENT

ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ರಾಜ್ಯದ ಜನರು ಭ್ರಮನಿರಸನಗೊಂಡಿದ್ದಾರೆ ಎಂದರು.

ಕೋವಿಡ್–19 ನಿಂದಾಗಿ ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ 36 ಜನರು ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಯಾವ ರೀತಿಯ ಸರ್ಕಾರವಿದೇ? ಜನರಿಗೆ ಯಾವ ರೀತಿಯ ಆಡಳಿತ ಸಿಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದರು.

ಈ ದುರ್ಘಟನೆಯ ಬಗ್ಗೆ ಯುವ ನಿರ್ದೇಶಕರೊಬ್ಬರು ಚಲನಚಿತ್ರ ಮಾಡಲು ಮುಂದಾಗಿದ್ದಾರೆ. ಇಂತಹ ಜನರ ಸಂಕಷ್ಟದ ಬಗ್ಗೆ ಯೋಚಿಸಿರುವ ನಿರ್ದೇಶಕರನ್ನು ಅಭಿನಂದಿಸುವುದಾಗಿ ಹೇಳಿದರು.

ರಾಜಸ್ಥಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರು ರಾಹುಲ್‌ ಗಾಂಧಿಯವರ ಮಾತು ಕೇಳುತ್ತಿಲ್ಲ. ನಾಯಕರನ್ನು ಒಟ್ಟಾಗಿ ಇಟ್ಟುಕೊಳ್ಳುವುದೇ ರಾಹುಲ್‌ ಅವರಿಗೆ ದೊಡ್ಡ ಕೆಲಸವಾಗಿದೆ ಎಂದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ 10 ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರಿದ್ದಾರೆ. ಇಂತಹ ಪರಿಸ್ಥಿತಿ ಎಡಪಕ್ಷಗಳಿಗೆ ಬಂದಿಲ್ಲ ಎಂದು ಹೇಳಿದರು.

ಸಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಥಿ ಸುಂದರೇಶ್‌ ಮಾತನಾಡಿ, ಬಿಜೆಪಿಯನ್ನು ಸೋಲಿಸಲು ಸಿಪಿಐ ಅಗತ್ಯ ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ. ಇದಕ್ಕಾಗಿ ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಇತರ ಎಡಪಕ್ಷಗಳ ಜೊತೆಗೆ ಕೆಲಸ ಮಾಡಲು ಸಿದ್ಧವಿದೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್ಎಸ್‌ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದ ಅವರು, ಕೋಮು ಗಲಭೆಯಲ್ಲಿ ಬಡ ಕುಟುಂಬದ ಯುವಕರ ಕೊಲೆಯಾಗುತ್ತಿದೆ. ಆದರೆ, ಸರ್ಕಾರ ಪರಿಹಾರ ನೀಡುವಲ್ಲಿ ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತಿದೆ. ಇದು ಅಸಂವಿಧಾನಿಕ ಕ್ರಮ ಎಂದು ಆರೋಪಿಸಿದರು.

ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಸಿ. ಡೋಂಗ್ರೆ ಇದ್ದರು. ಮೂರು ದಿನದ ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಯಿಂದ 189 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.