
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು.
ಹಾಸನ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಲ್ಲಿ ಶ್ರದ್ದೆ, ಏಕಾಗ್ರತೆ ಮತ್ತು ಆಸಕ್ತಿ ಮುಖ್ಯವಾಗಿದ್ದು, ಶ್ರಮಪಟ್ಟು ಓದಿದರೆ ಮಾತ್ರ ಯಶಸ್ಸು ಕಾಣಬಹುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ, ವರ್ಗದ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತಾದ ಒಂದು ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಸಾಧನೆ ಎಂಬುದು ಕಷ್ಟದ ದಾರಿಯಾಗಿರುತ್ತದೆ. ಶ್ರಮ ಮತ್ತು ಶ್ರದ್ಧೆ ಸಾಧನೆಯ ಭಾಗವಾಗಿದೆ. ಪದವಿ ಪಡೆಯುವ ಮುನ್ನವೇ ನಾವು ಮುಂದೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಿರಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವ ವಿದ್ಯಾರ್ಥಿಗಳು ಮಾನಸಿಕವಾಗಿ ಪರೀಕ್ಷೆ ಎದುರಿಸಲು ಸಿದ್ಧವಾಗಿರಬೇಕು. ಶ್ರಮಪಟ್ಟು ಅಧ್ಯಯನ ನಡೆಸಬೇಕು. ಆಗ ಮಾತ್ರ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಮುನ್ನ ವೇಳಾಪಟ್ಟಿ ರಚಿಸಿಕೊಳ್ಳಬೇಕು. ನಂತರ ಯಾವ ಹುದ್ದೆಗೆ ನಾವು ತಯಾರಿ ಮಾಡಿಕೊಳ್ಳಬೇಕು ಎಂಬ ನಿರ್ಧಾರ ಮಾಡಬೇಕು. ಸಮಯ ನಿರ್ವಹಣೆ ಮಾಡಿಕೊಂಡು ಪರೀಕ್ಷೆಗೆ ಸಿದ್ದತೆ ಮಾಡಬೇಕು. ಜೀವನದಲ್ಲಿ ಶಿಸ್ತು ಮುಖ್ಯವಾಗಿರುತ್ತದೆ. ಶಿಸ್ತು ಶ್ರದ್ದೆಯಿಂದ ಗುರಿ ಸಾದಿಸಬಹುದು ಎಂದರು.
ತರಬೇತಿ ಸಂಸ್ಥೆಗಳಿಗೆ ಶುಲ್ಕ ಪಾವತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ಆಯೋಜಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿ ಪಿ.ವಿ.ಬೈರಪ್ಪ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಹಂತಗಳನ್ನು ಸುದೀರ್ಘವಾಗಿ ವಿವರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಯೋಜನಾಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣವರ್, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಕುರಿತು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್‌ಪೀರ್ ಪಿ., ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.