ADVERTISEMENT

ವಿದ್ಯಾರ್ಥಿಗಳಿಗೆ ಹೃದಯ ಪರೀಕ್ಷೆ ನಡೆಸಿ: ಸಚಿವ ಕೆ.ಎನ್. ರಾಜಣ್ಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 1:49 IST
Last Updated 7 ಜುಲೈ 2025, 1:49 IST
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದರು. ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದರು. ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ಪ್ರತಿವರ್ಷ ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೃದಯ ಸಂಬಂಧಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಮತು ಇ-ಪೌತಿ ಖಾತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,‘15 ದಿನದೊಳಗೆ ತಪಾಸಣೆ ಮಾಡಬೇಕು’ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

‘ಜನರ ಜೀವನಶೈಲಿ, ಆಹಾರದ ಕ್ರಮ, ವಂಶಾವಳಿ ಸಮಸ್ಯೆ ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ದೈಹಿಕ ಕಸರತ್ತು ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ನಿಯಮಿತವಾಗಿ ಜನತೆ ಆರೋಗ್ಯ ತಪಾಸಣೆಗೊಳಗಾಗಬೇಕು’ ಎಂದರು.

ADVERTISEMENT

‘ವರದಿಯದಂತೆ ಜಿಲ್ಲೆಯಲ್ಲಿ 22 ಮಂದಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಇವರಲ್ಲಿ ನಾಲ್ವರ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಉಳಿದವರ ಮರಣೋತ್ತರ ಪರೀಕ್ಷೆ ಮಾಡಿದರೆ ಸಾವಿಗೆ ನಿಖರ ಕಾರಣ ಗೊತ್ತಾಗುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಅವಲಂಬಿತರಿಗೆ ಹೇಳಲಾಗುವುದಿಲ್ಲ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.

‘22 ಜನರಲ್ಲಿ ಮೂವರಿಗೆ ವಯಸ್ಸಾಗಿದ್ದು, ಉಳಿದವರು 40ಕ್ಕಿಂತ ಕಡಿಮೆ ವಯಸ್ಸಿನವರು. ಯುವಕರು ಸಾವಿಗೀಡಾಗುತ್ತಿರುವುದು ಬೇಸರದ ಸಂಗತಿ. ಆರೋಗ್ಯದ ಕುರಿತು ಮುನ್ನೆಚ್ಚರಿಕೆ ಅಗತ್ಯ. ಸರ್ಕಾರವೂ ಈ ಬಗ್ಗೆ ಕಾಳಜಿ ವಹಿಸಲು ಮುಂದಾಗಿದ್ದು, ಅಧಿಕಾರಿಗಳು ಕಾಲಕಾಲಕ್ಕೆ ಸಭೆ ಕರೆದು ಚರ್ಚಿಸಬೇಕು’ ಎಂದು ಹೇಳಿದರು.

‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜತೆ ಚಿರ್ಚಿಸಿದ್ದು, ವ್ಯಕ್ತಿಯೊಬ್ಬರು ಅಪಘಾತದಿಂದ ಮೃತಪಟ್ಟಿದ್ದರೂ ಮಾಧ್ಯಮಗಳು ಹೃದಯಘಾತದಿಂದ ಅವರು ಮೃತಪಟ್ಟಿದ್ದಾರೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು. ಇಲ್ಲದಿದ್ದರೆ ಜನತೆ ಆತಂಕಕ್ಕೆ ಒಳಗಾಗುತ್ತಾರೆ’ ಎಂದು ಹೇಳಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಹಿಮ್ಸ್‌ನಲ್ಲಿ ಮೆಗಾ ಆರೋಗ್ಯ ಶಿಬಿರ ಆಯೋಜಿಸಬೇಕು. ಈಗಿರುವ ಹೃದ್ರೋಗ ತಜ್ಞರ ಜತೆ ಇನ್ನು ಕೆಲವು ತಜ್ಞರನ್ನು ಹಿಮ್ಸ್‌ಗೆ ನೇಮಿಸಲು ಕ್ರಮವಹಿಸಬೇಕು’ ಎಂದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ‘ವ್ಯಸನಿಗಳಾಗುವುದು, ಧೂಮಪಾನ, ಒತ್ತಡದಿಂದ ಆರೋಗ್ಯ ಸಮಸ್ಯೆಯಾಗುತ್ತಿದೆ’ ಎಂದು ತಿಳಿಸಿದರು.

ಪುನೀತ್‍ರಾಜ್‍ಕುಮಾರ್ ‘ಹೃದಯ ಜ್ಯೋತಿ’ ಯೋಜನೆಯಡಿ ಹಾಸನ, ಚನ್ನರಾಯಪಟ್ಟಣ, ಹೊಳೆನರಸೀಪುರದ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಸ್ಟೆಮಿ ಕಿಟ್ ಅಳವಡಿಸಲಾಗಿದೆ. ಉಳಿದ 5 ತಾಲ್ಲೂಕುಗಳಲ್ಲಿ ಅಳವಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಹೃದಯಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ ಉಚಿತವಾಗಿ ಚುಚ್ಚುಮದ್ದು ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ತಿಳಿಸಿದರು.

ಸಂಸದ ಶ್ರೇಯಸ್ ಎಂ ಪಟೇಲ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಉಪವಿಭಾಗಾಧಿಕಾರಿ ಜೆ.ಬಿ. ಮಾರುತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ, ತಹಶೀಲ್ದಾರ್ ಶಂಕರಪ್ಪ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಸೇರಿ ಅಧಿಕಾರಿಗಳು ಭಾಗವಹಿಸಿದ್ದರು.

ದರಖಾಸ್ತು ಪೋಡಿಯಲ್ಲಿ ಜಿಲ್ಲೆ ಮೊದಲು
‘ಪ್ರತಿ ತಿಂಗಳ ಮೊದಲನೇ ಶನಿವಾರ ತಾಲ್ಲೂಕುಗಳಲ್ಲಿ ಕುಂದುಕೊರತೆ ಸಭೆಯನ್ನು ತಹಶೀಲ್ದಾರ್ ಅದೇ ರೀತಿ ಮೂರನೇ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಸಭೆಯನ್ನು ಏರ್ಪಡಿಸಿ ಜನರನ್ನು ಅಲೆದಾಡಿಸದೆ ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು. ದರಖಾಸ್ತು ಪೋಡಿ ಮಾಡುವಲ್ಲಿ ರಾಜ್ಯದಲ್ಲಿ ಹಾಸನ ಜಿಲ್ಲೆ ಮೊದಲನೇ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ. ಅಧಿಕಾರಿಗಳ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.