ಹಾಸನ: ‘ಚುನಾವಣಾ ಸಂದರ್ಭಕ್ಕೆ ಸೀಮಿತಗೊಳ್ಳದೇ ವರ್ಷದ 365 ದಿನವೂ ಪ್ರಚಾರ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷಪೂರ್ತಿ ಸಮಿತಿಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದರು.
‘ಜಿಲ್ಲಾ, ಬ್ಲಾಕ್, ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಹಾಗೂ ಡಿಜಿಟಲ್ ಯೂತ್ ಹೆಸರಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಸದಸ್ಯರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 59 ಸಾವಿರ ಬೂತ್‌ಗಳಿದ್ದು, ಕನಿಷ್ಠ ಪ್ರತಿ ಬೂತ್‌ನಿಂದ ಇಬ್ಬರು ಸದಸ್ಯರು ಸೇರಿದರೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರ್ಪಡೆಯಾಗಲಿದ್ದಾರೆ’ ಎಂದರು.
‘ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಡಿ ಇದನ್ನು ಆರಂಭಿಸಲಾಗಿದೆ’ ಎಂದರು.
‘ಇತ್ತೀಚೆಗೆ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ, ದೇಶದ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಒಂದನೇ ಸ್ಥಾನದಲ್ಲಿದೆ. ₹ 2.9 ಲಕ್ಷ ತಲಾ ಆದಾಯವನ್ನು ರಾಜ್ಯ ಹೊಂದಿದೆ’ ಎಂದು ವಿವರಿಸಿದರು.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಪಡೆದ ಕಾಂಗ್ರೆಸ್, ಮತಗಳ್ಳತನದಲ್ಲಿ ಪಾಲು ಇಲ್ಲವೇ ಎಂಬ ಬಿಜೆಪಿಯವರು ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸೊರಕೆ, ‘ಕಳೆದ ಬಾರಿಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಭಾವ ಬೀರಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಜಾತ್ಯತೀತ ಎಂದು ಹೇಳಿಕೊಂಡು ಜೆಡಿಎಸ್, ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸೂಕ್ತ ಕಾಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೃಷ್ಣ ಬೈರೇಗೌಡ ಕ್ರಿಯಾಶೀಲರಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಈ.ಎಚ್. ಲಕ್ಷ್ಮಣ್, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜೇಗೌಡ, ಮುನೀರ್, ರಘು ದಾಸರಕೊಪ್ಪಲು, ಪದ್ಮ ಪ್ರಸಾದ್, ಆಸಿಫ್ ಇದ್ದರು.
ಜಿಲ್ಲಾ ಬ್ಲಾಕ್ ಮಟ್ಟದ ಸಮಿತಿ ಜೊತೆಗೆ ಮುಂದಿನ ಚುನಾವಣೆ ಸ್ಪರ್ಧೆಯ ಹಿನ್ನೆಲೆ ಅಲ್ಲಲ್ಲಿ ಕಾರ್ಯಾಗಾರ ಏರ್ಪಡಿಸುವ ಮೂಲಕ ಪ್ರಚಾರ ಸಮಿತಿಗೆ ಚಾಲನೆ ನೀಡಲಾಗುತ್ತಿದೆ.ವಿನಯ್‌ಕುಮಾರ್ ಸೊರಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.