ADVERTISEMENT

ರಾಜ್ಯವನ್ನು ಎಟಿಎಂ ಮಾಡಿಕೊಂಡ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 3:20 IST
Last Updated 14 ಫೆಬ್ರುವರಿ 2026, 3:20 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಹಾಸನ: ‘ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಇಲ್ಲಿಂದ ಇತರೆ ರಾಜ್ಯಗಳ ಚುನಾವಣೆಗೆ ಹಣ ಹರಿಸಲಾಗುತ್ತಿದೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಬಕಾರಿ ಇಲಾಖೆಯಲ್ಲಿ ನಡೆದಿರುವ ₹6 ಸಾವಿರ ಕೋಟಿ ಹಗರಣದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಅಬಕಾರಿ ಸಚಿವರ ರಾಜೀನಾಮೆ ಪಡೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜೀನಾಮೆ ಪಡೆದರೆ ಆರೋಪ ಸಾಬೀತಾಗಲಿದೆ ಎಂಬ ಭಯ ಸರ್ಕಾರದ್ದು’ ಎಂದರು. 

‘ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಪಾವತಿಸಿಲ್ಲ. ₹5 ಸಾವಿರ ಕೋಟಿ ಎಲ್ಲಿಗೆ ಹೋಯಿತು ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಗೃಹಲಕ್ಷ್ಮಿಯರಿಗೆ ಕೊಡಬೇಕಾದ ಹಣ ಹೋಗಿದ್ದು ಬೆಳಗಾವಿ ಲಕ್ಷ್ಮಿಗೆ’ ಎಂದು ಟೀಕಿಸಿದರು. 

ADVERTISEMENT

‘ವಿಬಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನವನ್ನು ಕರೆದಿದ್ದು, ಸಾರ್ವಜನಿಕರ ₹30-40 ಕೋಟಿ ವೆಚ್ಚವಾಗಿದೆ. ಅದನ್ನು ಬಡವರಿಗೆ ನೀಡಬಹುದಿತ್ತು. ಅಧಿವೇಶನಕ್ಕೆ ರಾಜ್ಯಪಾಲರನ್ನು ಕರೆದು ಅವಮಾನಿಸಲಾಗಿದೆ’ ಎಂದು ದೂರಿದರು.

‘ಹಿಂದಿನ ಮತ್ತು ಇಂದಿನ ಸಿದ್ದರಾಮಯ್ಯ ನಡುವೆ ವ್ಯತ್ಯಾಸವಿದೆ. ಕಾಂಗ್ರೆಸ್ ನೆಲಕಚ್ಚುತ್ತಿದೆ. ಈಗ ಚುನಾವಣೆ ನಡೆದರೂ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕೆಲ ಎಡಪಂಥೀಯ ಸಂಘಟನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದು ಟೀಕಿಸಿದರು.

‘2028ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಜೆಡಿಎಸ್ 113 ಸ್ಥಾನ ಗೆದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು. ಅದನ್ನು ತಡೆಯಲು ನಾವು ಯಾರು? ಅದೇ ರೀತಿ ನಾವು 113 ಗೆದ್ದರೆ ನಮ್ಮವರೇ ಸಿಎಂ ಆಗುತ್ತಾರೆ’ ಎಂದರು.

‘ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಸಂಬಂಧಿಸಿ ಕೇಂದ್ರ ನಾಯಕರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.