
ಅರಕಲಗೂಡು: ಸಮಾಜದಲ್ಲಿ ಸುಶಿಕ್ಷಿತರಾದವರು ಶೋಷಿತರು, ಅವಕಾಶ ವಂಚಿತರನ್ನು ಗುರುತಿಸಿ ಮುಂದೆ ತರುವ ಪ್ರಯತ್ನ ನಡೆಸಿದಾಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ವಿಶ್ವಚೇತನ ಜೈಭೀಮ್ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿದ್ದಾರೆ. ಅದನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಅಂಬೇಡ್ಕರ್ ಅಕ್ಕಿ, ನೀರು ಕೊಟ್ಟಿದ್ದಾರೆ, ಅನ್ನಮಾಡಿಕೊಂಡು ಊಟ ಮಾಡುವುದನ್ನು ಕಲಿಯಬೇಕಿದೆ’ ಎಂದರು.
‘ಸಂವಿಧಾನ ನಮಗೆಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಭಾಷಣ, ಚಳವಳಿ, ಹೋರಾಟದಲ್ಲೆ ನಮ್ಮ ಶ್ರಮ ಕಳೆದುಕೊಳ್ಳುತ್ತಿದ್ದೇವೆ. ಬೇರೆಯವರು ಇದರ ಲಾಭವನ್ನು ಪಡೆಯುತ್ತಾರೆ. ಯಾರಿಗೆ ಅನ್ಯಾಯವಾಗಿದೆ, ಯಾರಿಗೆ ಬೆಳಕು ಸಿಗುತ್ತಿಲ್ಲ ಅಂತಹವರನ್ನು ಗುರುತಿಸಿ ಕೈಹಿಡಿದು ನಡೆಸಬೇಕು ಆಗ ಮಾತ್ರ ಬಾಬಾ ಸಾಹೇಬರ ಉದ್ದೇಶ ಈಡೇರಿದಂತಾಗುತ್ತದೆ’ ಎಂದು ಹೇಳಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್. ಪಿ. ಶ್ರೀಧರ್‌ಗೌಡ ಮಾತನಾಡಿ, ‘ಸಂಘ, ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಹಾದಿ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನೊಂದವರ ಪರ ಧ್ವನಿಯಾಗಿ ಸಂಸ್ಥೆ ಮುನ್ನಡೆಯುವಂತಾಗಲಿ’ ಎಂದರು.
ಟ್ರಸ್ಟ್ ಅಧ್ಯಕ್ಷ ಎ.ಸಿ.ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಟ್ರಸ್ಟ್ ಸ್ಥಾಪಿಸಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮುಖಂಡ ಎ.ಟಿ.ಕೃಷ್ಣೇಗೌಡ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಚನ್ನಕೇಶವ, ಚಾಮರಾಜನಗರ ಉಪ ವಿಭಾಗಾಧಿಕಾರಿ ಮಹೇಶ್, ವಕೀಲ ಬಿ.ಸಿ.ರಾಜೇಶ್, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಅತ್ನಿ ಹರೀಶ್, ಡಾ. ರೇವಣ್ಣ, ಉದ್ಯಮಿ ಕಾಂತರಾಜು, ಪತ್ರಕರ್ತ ಹೆತ್ತೂರು ನಾಗರಾಜ್, ವಿಷ್ಣುಪ್ರಕಾಶ್, ಎಂ.ಸಿ.ರಾಜೇಂದ್ರ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಕೆ.ಸಿ. ಸೌಮ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ ಪುಷ್ಪಲತಾ, ಶಿರಸ್ತೇದಾರ್ ಸಿ. ಸ್ವಾಮಿ, ಸೋಮಶೇಖರ್, ವಕೀಲ ನಾಗರಾಜ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಯ್ಯ, ದಸಂಸ ಮುಖಂಡ ದುಮ್ಮಿಕೃಷ್ಣ, ಟ್ರಸ್ಟ್ ಪದಾಧಿಕಾರಿಗಳಾದ ಲೋಕೇಶ್, ರಂಗಸ್ವಾಮಿ, ಪ್ರದೀಪ್, ಮೋಹನ್ ಕುಮಾರ್, ಗಣೇಶ್, ಅಶೋಕ್, ಪ್ರಿಯವರ್ಧನ್, ದಿಲೀಪ್ ಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ನಡೆದ ಬೈಕ್ ರ‍್ಯಾಲಿಗೆ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.