
ಹಾಸನ: ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಗುತ್ತಿಗೆ ಪದ್ಧತಿ ಕೊನೆಗೊಳಿಸಿ, ನೌಕರರನ್ನು ಕಾಯಮಾತಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಹಿಮ್ಸ್ ಆವರಣದಿಂದ ಹೊರಟ ಪ್ರತಿಭಟನಕಾರರು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.
ಸಂಘದ ಮುಖಂಡ ಅಕ್ಷಯ್ ಡಿ.ಎಂ.ಗೌಡ ಮಾತನಾಡಿ, ಹೊರಗುತ್ತಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ತಿಂಗಳಿನಿಂದ ಹೋರಾಟ ನಡೆಸಿದರೂ, ಸರ್ಕಾರದಿಂದ ಸ್ಪಷ್ಟ ಸ್ಪಂದನೆ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್–19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸಿದ ಹೊರಗುತ್ತಿಗೆ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರೂ, ಇಂದಿಗೂ ಸೂಕ್ತ ಸೌಲಭ್ಯ ಹಾಗೂ ಸೇವಾಭದ್ರತೆ ದೊರಕುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು. ಇಲ್ಲವೇ ಹೊಸ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆ ಸಂಯೋಜಿತವಾಗಿ ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದು, ಬಹುತೇಕರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುವುದರಿಂದ ನೌಕರರಲ್ಲಿ ಗೊಂದಲ ಮತ್ತು ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಿದೆ ಎಂದು ಆರೋಪಿಸಿದರು.
‘ರಾಜ್ಯ ಸಂಘವು ಮಾರ್ಚ್ 23ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ಅದರ ಭಾಗವಾಗಿ ಬುಧವಾರ ಜಿಲ್ಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಸೇವೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೌಕರರ ಕಾಯಂ ಮಾಡಬೇಕು. ನೇರ ಪಾವತಿ ವ್ಯವಸ್ಥೆ ಜಾರಿ, ಒಳಗುತ್ತಿಗೆ ಪದ್ಧತಿಯಲ್ಲಿ ಸೇವಾಭದ್ರತೆ, ಇಂದಿನ ಜೀವನಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ಹೆಚ್ಚಳ ಹಾಗೂ ಸರ್ಕಾರದ ದ್ವಂದ್ವ ನಿಲುವಿಗೆ ಅಂತ್ಯ ಕೋರಿ ಸ್ಪಷ್ಟ ನಿರ್ಧಾರ ಪ್ರಕಟಿಸುವಂತೆ ಒತ್ತಾಯಿಸಿದರು.
ಮಂಜುಳಾ, ರಮೇಶ್, ರಾಜಯ್ಯ, ಸಿದ್ದಪ್ಪ, ಹೇಮಲತಾ, ರೋಝಿ ಮೇರಿ, ರಾಹುಲ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆಗಿಲೆ ಯೋಗೀಶ್ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.