ADVERTISEMENT

ಅರಸೀಕೆರೆ: ಕೋರ್ಟ್‌ ಸಂಕೀರ್ಣ ಲೋಕಾರ್ಪಣೆ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:23 IST
Last Updated 20 ಡಿಸೆಂಬರ್ 2025, 6:23 IST
<div class="paragraphs"><p>ಅರಸೀಕೆರೆಯಲ್ಲಿ ಉದ್ಘಾಟನೆಗೆ ಕಾದಿರುವ ಸುಸಜ್ಜಿತ ನ್ಯಾಯಾಲಯಗಳ ಸಂಕೀರ್ಣ</p></div>

ಅರಸೀಕೆರೆಯಲ್ಲಿ ಉದ್ಘಾಟನೆಗೆ ಕಾದಿರುವ ಸುಸಜ್ಜಿತ ನ್ಯಾಯಾಲಯಗಳ ಸಂಕೀರ್ಣ

   

ಅರಸೀಕೆರೆ: ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಆಗದಿರುವುದು ಕಕ್ಷಿದಾರರು ಹಾಗೂ ವಕೀಲರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಹೈಕೋರ್ಟ್‌ ಮಾದರಿಯಯಲ್ಲಿ ಸುಸಜ್ಜಿತ ಕಟ್ಟಡ, ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ,
ವಿದ್ಯುತ್, ಶೌಚಾಲಯ ಸೇರಿದಂತೆ ಎಲ್ಲ ಬಗೆಯ  ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ‘ಕಟ್ಟಡ ಕಾಮಗಾರಿ ಪೂರ್ಣಗೊಂಡು ಹತ್ತಾರು ತಿಂಗಳು ಕಳೆದಿದ್ದರೂ ಬಹುಕೋಟಿ ವೆಚ್ಚದ ಸಂಕೀರ್ಣಕ್ಕೆ ಉದ್ಘಾಟನೆಯ ಭಾಗ್ಯ ಲಭಿಸಿಲ್ಲ’ ಎಂಬುದು ಜನರ ಅಸಮಾಧಾನಕ್ಕೆ
ಕಾರಣವಾಗಿದೆ.

ADVERTISEMENT

ನೆಲಮಹಡಿಯಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಕಚೇರಿ ಸಿಬ್ಬಂದಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.  ಮೂರು ಮಹಡಿಗಳಲ್ಲಿ ತಲಾ ಎರಡು ಕೋರ್ಟ್ ಹಾಲ್‌ಗಳನ್ನು ನಿರ್ಮಿಸಲಾಗಿದೆ. ನಾಲ್ಕನೇ ಮಹಡಿಯಲ್ಲಿ ವಿಡಿಯೊ ಕಾನ್ಪರೆನ್ಸ್ ಹಾಲ್, ಸಂಧಾನ ಸಭೆ ನಡೆಸುವ ಕೊಠಡಿ, ಎಜಿಪಿ ಹಾಗೂ ಎಎಪಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಆಸನ, ಮೂಲಸೌಕರ್ಯಗಳೊಂದಿಗೆ, ವಕೀಲರ ಭವನದಿಂದ ನ್ಯಾಯಾಲಯ ಕಟ್ಟಡಕ್ಕೆ  ಸ್ಕೈವಾಕ್, ಟೈಪಿಂಗ್ ಲಾನ್ ಸವಲತ್ತುಗಳನ್ನು ಒದಗಿಸಲಾಗಿದೆ. ಆದರೆ, ನ್ಯಾಯಾಲಯ ಸಂಕೀರ್ಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು ಆಗುತ್ತಿರುವ ವಿಳಂಬಕ್ಕೆ ಆಕ್ರೋಶ
ವ್ಯಕ್ತವಾಗಿವೆ.

‘ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಸೇರಿದಂತೆ ಸಾವಿರಾರು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಕ್ಷಿದಾರರ ದಟ್ಟಣೆಯನ್ನು ಅರಿಯಬೇಕಾಗಿದೆ. ಇತೀಚೆಗೆ ನಡೆದ ಲೋಕ್‌ ಅದಾಲತ್‌ನಲ್ಲಿ ಕೌಟುಂಬಿಕ ಸಮಸ್ಯೆ, ಚೆಕ್ ಬೌನ್ಸ್, ಗಲಾಟೆ, ಅಪಘಾತ, ವಿಮಾ ಪರಿಹಾರ, ಆಸ್ತಿ ಕಲಹ  ಮುಂತಾದ ವ್ಯಾಜ್ಯ ವಿಚಾರಣೆ ವೇಳೆ ಸ್ಥಳಾವಕಾಶದ ಕೊರತೆಯಿಂದ ಕಿರಿಕಿರಿಯಾಯಿತು’ ಎನ್ನುತ್ತಾರೆ
ವಕೀಲರು.

ಸುಸಜ್ಜಿತ ಕಟ್ಟಡ ಉದ್ಘಾಟನೆಗೊಳ್ಳದ್ದರಿಂದ ಪ್ರಧಾನ ಸಿವಿಲ್ ನ್ಯಾಯಾಲಯದ ಕಲಾಪ ಹೊರತುಪಡಿಸಿ, ಉಳಿದ ಕಲಾಪಗಳನ್ನು ವಕೀಲರ ಭವನದ ಕಿರು ಕೊಠಡಿಗಳಲ್ಲಿ ನಡೆಸಲಾಗುತ್ತಿದೆ.
ದಂಪತಿ ಪ್ರಕರಣಗಳಲ್ಲಿ ಸಂಧಾನ ಸಭೆ ನಡೆಸಲು ಜಾಗದ ತೊಂದರೆ ಎದುರಾಗಿದೆ. ವಕೀಲರ ಸಂಘದ ಕಾರ್ಯ ಚಟುವಟಿಕೆಗಳ ಆಯೋಜನೆಗೂ ಸ್ಥಳಾವಕಾಶದ ಕೊರತೆ ಇದೆ. ಹೊಸ ಕಟ್ಟಡದಲ್ಲಿ ಇವೆಲ್ಲವೂ ಇವೆ. ಆದರೆ ಉದ್ಘಾಟನೆ ಆಗಿಲ್ಲ ಎಂಬುದೇ ಸಮಸ್ಯೆಗೆ ಕಾರಣವಾಗಿದೆ.

ಕಾಲ ಕೂಡಿ ಬಂದಿಲ್ಲ..
ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್ ನ್ಯಾಯಾಧೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 26ರಂದು ಲೋಕಾರ್ಪಣೆ ಮಾಡಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ಅಗಸ್ಟ್, ಸೆಪ್ಟೆಂಬರ್‌ಗೆ ಮುಂದೂಡಲಾಗಿತ್ತು. ಇದೀಗ ಹೊಸವರ್ಷದ ಹೊಸ್ತಿಲಿನಲ್ಲಿದ್ದರೂ ಕಟ್ಟಡವು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂಬುದು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕಟ್ಟಡಕ್ಕೆ ಅಗ್ನಿ ಸುರಕ್ಷತಾ ಕ್ರಮಗಳ ಕೆಲಸ ಪ್ರಗತಿಯಲ್ಲಿದ್ದು, ನ್ಯಾಯಾಂಗ ಇಲಾಖೆಯಿಂದ ಅನುಮತಿ ದೊರೆತ ಕೂಡಲೇ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು.
– ಬಾಲಾಜಿ, ಲೋಕೋಪಯೋಗಿ ಇಲಾಖೆ ಎಇಇ ಅರಸೀಕೆರೆ
ವಕೀಲರು, ಕಕ್ಷಿದಾರರಿಗೆ ಆಗುತ್ತಿರುವ ಅನಗತ್ಯ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಕೋರ್ಟ್ ಕಟ್ಟಡವನ್ನು ಆದಷ್ಟು ಬೇಗ ಲೋಕಾರ್ಪಣೆ ಮಾಡಬೇಕು.
– ಬಿ.ಕೆ.ವಿವೇಕ್, ವಕೀಲ ಅರಸೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.