
ಹಾಸನ: ಹಾಸನಾಂಬ ದರ್ಶನ ಉತ್ಸವದ 12ನೇ ದಿನವಾದ ಮಂಗಳವಾರ ಬೆಳಿಗ್ಗೆ ಭಕ್ತರ ಸಂಖ್ಯೆ ವಿರಳವಾಗಿದ್ದರೂ, ಮಧ್ಯಾಹ್ನದ ನಂತರ ದೇವಿಯ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದರು.
ಬೆಳಿಗ್ಗೆ ಧರ್ಮದರ್ಶನ ಸೇರಿದಂತೆ ವಿಶೇಷ ದರ್ಶನದ ಸರತಿ ಸಾಲುಗಳು ಖಾಲಿ ಇದ್ದವು. ಮಧ್ಯಾಹ್ನದ ನಂತರ ವಿವಿಧೆಡೆಯಿಂದ ಬಂದ ಸಾವಿರಾರು ಜನರು, ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಸಾಲು ಸಾಲು ರಜೆ ಹಾಗೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಜನರು ಹಾಸನಾಂಬ ದರ್ಶನಕ್ಕೆ ಹೆಚ್ಚಿನ ಜನರು ಬರುವ ನಿರೀಕ್ಷೆ ಇತ್ತು. ಆದರೆ ಮಳೆಯ ವಾತಾವರಣ ಸೇರಿದಂತೆ ಇತರೆ ಕಾರಣಗಳಿಂದ ದರ್ಶನಕ್ಕೆ ಹೆಚ್ಚಿನ ಸಂಖ್ಯೆ ಬೆಳಿಗ್ಗೆ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 60 ಸಾವಿರ ಮಂದಿ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಮಧ್ಯಾಹ್ನದ ನಂತರ ಎಲ್ಲ ಸಾಲುಗಳು ಮತ್ತೆ ಭರ್ತಿಯಾಗಿದ್ದವು.
ಶಿಷ್ಟಾಚಾರ ದರ್ಶನ ಮುಕ್ತಾಯ: ಹಾಸನಾಂಬ ದೇವಿ ದರ್ಶನಕ್ಕೆ ಬರುವ ಗಣ್ಯರಿಗೆ ನೀಡಲಾಗಿದ್ದ ಶಿಷ್ಟಾಚಾರ ವ್ಯವಸ್ಥೆಯನ್ನು ಮಂಗಳವಾರದಿಂದ ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ದರ್ಶನಕ್ಕೆ ಬಂದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ₹ 1 ಸಾವಿರ ಟಿಕೆಟ್ ಖರೀದಿಸಿ ಸರತಿ ಸಾಲಿನಲ್ಲಿ ತೆರಳಿ ದೇವಿಯ ದರ್ಶನ ಪಡೆದರು.
ಪುಟ್ಟರಂಗಶೆಟ್ಟಿ ಅವರು ಮಗ ಹಾಗೂ ಸ್ನೇಹಿತರ ಜೊತೆ ಬಂದಿದ್ದು, ದೇವಸ್ಥಾನದ ಬಳಿ ಬರುತ್ತಿದ್ದಂತೆ ಬ್ಯಾರಿಕೇಡ್‌ನಿಂದ ಹೊರಗೆ ಬಂದು ಮುಖ್ಯದ್ವಾರದಿಂದ ತೆರಳಲು ಮುಂದಾದರು. ಈ ವೇಳೆ ಗೇಟ್ ಬಳಿಯೇ ನಿಂತಿದ್ದ ಬೇಲೂರು ತಹಶೀಲ್ದಾರ್, ₹1 ಸಾವಿರ ಕ್ಯೂನಲ್ಲಿ ಹೋಗುವಂತೆ ಮನವಿ ಮಾಡಿದರು.
ದೇವಾಲಯದ ಬಳಿ ಇದ್ದ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಪುಟ್ಟರಂಗಶೆಟ್ಟಿ ಮೂಲಕ ಕರೆ ಮಾಡಿದರು. ಆದರೂ ಮುಖ್ಯದ್ವಾರದಲ್ಲಿ ಪ್ರವೇಶಕ್ಕೆ ಅಧಿಕಾರಿಗಳು ಬಿಡಲಿಲ್ಲ. ನಂತರ ಅವರು ಸರದಿ ಸಾಲಿಗೆ ವಾಪಸ್ ತೆರಳಿ ದೇವಿಯ ದರ್ಶನ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಶಿಷ್ಟಾಚಾರ ದರ್ಶನ ವ್ಯವಸ್ಥೆ ಮುಗಿದ ಮೇಲೆ ಕೆಲವು ಗಣ್ಯರು ಹಾಗೂ ಸ್ವಾಮೀಜಿಗಳು ಪಾಸ್ ಅಥವಾ ₹ 1ಸಾವಿರ ಟಿಕೆಟ್ ಮೂಲಕ ದರ್ಶನ ಪಡೆಯುತ್ತಿದ್ದಾರೆ ಎಂದರು.
ಪೂಜೆ ಹಾಗೂ ನೈವೇದ್ಯ ಇರುವುದರಿಂದ ಮಂಗಳವಾರ ರಾತ್ರಿ 9 ಗಂಟೆಯಿಂದ ಹಾಸನಾಂಬ ದೇವಿ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಬುಧವಾರ ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ಸಾರ್ವಜನಿಕರಿಗೆ ದರ್ಶನ ಇರಲಿದೆ. ರಾತ್ರಿ 7 ರಿಂದ ಮಧ್ಯರಾತ್ರಿ 12 ರವರೆಗೆ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು ಎಂದು ತಿಳಿಸಿದರು.
ಬುಧವಾರ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕೆಂಡೋತ್ಸವ ಹಾಗೂ ರಥೋತ್ಸವ ನಡೆಯಲಿದ್ದು, ರಾತ್ರಿ 12 ರಿಂದ ಗುರುವಾರ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಹಾಗೂ ದೇವಸ್ಥಾನದ ಸುತ್ತಲಿನವರಿಗೆ ದರ್ಶನದ ವ್ಯವಸ್ಥೆ ಇರಲಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ. ಮಧ್ಯಾಹ್ನ 12.30 ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುವುದು ಎಂದು ಹೇಳಿದರು.
ಇದುವರೆಗೆ 23 ಲಕ್ಷ ಮಂದಿ ದರ್ಶನ
ಈ ಬಾರಿಯ ಹಾಸನಾಂಬ ದರ್ಶನೋತ್ಸವ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಂತೆ 23 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ. ಇದುವರೆಗೆ 23 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದು ₹1ಸಾವಿರ ಹಾಗೂ ₹ 300 ವಿಶೇಷ ದರ್ಶನದ ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ ಸುಮಾರು ₹ 20 ಕೋಟಿ ಆದಾಯ ಬಂದಿದೆ ಎಂದು ಹೇಳಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು ಮಧ್ಯಾಹ್ನದವರೆಗೆ 68ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಗಳವಾರ ಹಾಗೂ ಬುಧವಾರ ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ಶಿಷ್ಟಾಚಾರ ವ್ಯವಸ್ಥೆ ಮುಂದುವರಿಸಿದ್ದರೆ ಭಕ್ತರಿಗೆ ತೊಂದರೆ ಆಗುತ್ತಿರಲಿಲ್ಲ ಎಂದರು.
ಕಳೆದ ವರ್ಷ 17.46 ಲಕ್ಷ ಜನರಿಂದ ದರ್ಶನ
ಮಂಗಳವಾರ ದರ್ಶನ ಬಹಳ ಸರಾಗವಾಗಿ ನಡೆದಿದೆ. ಸೋಮವಾರ ಸುಮಾರು 2 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ 23ಲಕ್ಷ ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಒಟ್ಟಾರೆ 17.46 ಲಕ್ಷ ಜನ ದರ್ಶನ ಪಡೆದಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ವರ್ಷ ಟಿಕೆಟ್ ಸಾಲಿನಲ್ಲಿ 340260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಸಾಲಿನಲ್ಲಿ ಒಟ್ಟಾರೆ 129956 ಜನ ದರ್ಶನ ಪಡೆದಿದ್ದರು ಎಂದು ಹೇಳಿದ್ದಾರೆ. ಮಂಗಳವಾರ ಮತ್ತು ಬುಧವಾರ ದರ್ಶನ ಲಭ್ಯವಿದೆ. ಮಂಗಳವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ನೈವೇದ್ಯ ಇರುವುದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಮಂಗಳವಾರ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲಿದ್ದು ದರ್ಶನ ಮಧ್ಯರಾತ್ರಿ 12 ಗಂಟೆಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಕಳೆದ ಸರ ಮತ್ತೆ ಮಹಿಳೆಗೆ ವಾಪಸ್
ದೇವಾಲಯದ ಆವರಣದಲ್ಲಿ ಕಳೆದು ಹೋಗಿದ್ದ ಬರೋಬ್ಬರಿ ₹ 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪತ್ತೆ ಹಚ್ಚಿ ಅದನ್ನು ಕಳೆದುಕೊಂಡ ಮಹಿಳೆಗೆ ಮರಳಿಸಿದ್ದಾರೆ. ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ದೇವಿಯ ದರ್ಶನ ಪಡೆಯುವ ವೇಳೆ ಚಿನ್ನದ ಸರ ಕಳೆದುಕೊಂಡಿದ್ದರು. ಈ ಸರವನ್ನು ದೇವಾಲಯದ ಆವರಣದಲ್ಲಿ ದರ್ಶನಕ್ಕೆ ಬಂದಿದ್ದ ಮತ್ತೊಬ್ಬ ಭಕ್ತರು ಪತ್ತೆ ಮಾಡಿದ್ದು ತಕ್ಷಣವೇ ಅದನ್ನು ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದರು. ಬಳಿಕ ಸರ ಕಳೆದುಕೊಂಡಿದ್ದ ಮೈಸೂರಿನ ಮಹಿಳೆಯನ್ನು ಸಂಪರ್ಕಿಸಿ ಗುರುತಿನ ಚೀಟಿ ಪರಿಶೀಲಿಸಿ ಅವರಿಗೆ ಮರಳಿಸಲಾಯಿತು. ಚಿನ್ನದ ಸರ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಸಂತಸ ವ್ಯಕ್ತಪಡಿಸಿದರು. ಭಕ್ತರ ಈ ಅಪೂರ್ವ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.