ADVERTISEMENT

ಹಾಸನ: ಕೋವಿಡ್ ಆತಂಕದ ನಡುವೆಯೂ ಖರೀದಿ ಬಿರುಸು

ಮಾಸ್ಕ್‌ ಧರಿಸದೆ, ಅಂತರ ಮರೆತ ಸಾರ್ವಜನಿಕರು – ಟ್ರಾಫಿಕ್‌ ಜಾಮ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:31 IST
Last Updated 15 ಜನವರಿ 2022, 8:31 IST
ಹಾಸನ ನಗರದ ಕಸ್ತೂರ ಬಾ ರಸ್ತೆಯಲ್ಲಿ ಶುಕ್ರವಾರ ಹಬ್ಬದ ಖರೀದಿ ವೇಳೆ ಜನ ಜಂಗುಳಿ ಏರ್ಪಟ್ಟಿತ್ತು
ಹಾಸನ ನಗರದ ಕಸ್ತೂರ ಬಾ ರಸ್ತೆಯಲ್ಲಿ ಶುಕ್ರವಾರ ಹಬ್ಬದ ಖರೀದಿ ವೇಳೆ ಜನ ಜಂಗುಳಿ ಏರ್ಪಟ್ಟಿತ್ತು   

ಹಾಸನ: ಕೋವಿಡ್‌ ಆತಂಕದ ನಡುವೆಯೂ ಸಕ್ರಾಂತಿ ಹಬ್ಬದ ಹಿನ್ನೆಲೆ ಶುಕ್ರವಾರ ನಗರದ ಕಟ್ಟಿನಕೆರೆ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.

ನಗರದ ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬೆಳಿಗ್ಗೆಯಿಂದ ವ್ಯಾಪಾರ ನೀರಸವಾಗಿತ್ತಾದರೂ ಮಧ್ಯಾಹ್ನದ ನಂತರ ಬಿರುಸು ಪಡೆಯಿತು.

ರೈತರು ಹಾಗೂ ವರ್ತಕರು ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ ಮೇಲೆ ಕಬ್ಬು, ಹೂವು ಹಣ್ಣು, ಮಾವಿನ ಸೊಪ್ಪು, ಎಳ್ಳು ಬೆಲ್ಲ, ತರಕಾರಿ ಮಾರಾಟ ಮಾಡಿದರು.

ADVERTISEMENT

ಕಬ್ಬಿನ ಜಲ್ಲೆ₹30 ರಿಂದ ₹80, ಮಾವಿನ ಸೊಪ್ಪು ಒಂದು ಕಟ್ಟಿಗೆ ₹20, ಸೇವಂತಿಗೆ ಒಂದು ಮಾರಿಗೆ ₹60 ರಿಂದ ₹100, ಮಲ್ಲಿಗೆ (ಕಾಕಡ) ಒಂದು ಮಾರು ₹60ರಂತೆ ಮಾರಾಟವಾಯಿತು. ಬಾಳೆಹಣ್ಣು ಕೆ.ಜಿ ಗೆ ₹70 ರಿಂದ ₹90, ಅವರೆಕಾಯಿ ಕೆ.ಜಿಗೆ ₹50 ರಿಂದ ₹80 ಇತ್ತು. ಎಳ್ಳು ಬೆಲ್ಲ ಕೆ.ಜಿ ಗೆ ₹120, ಸೇಬು ಕೆ.ಜಿ ಗೆ ₹140, ದಾಳಿಂಬೆ ಕೆ.ಜಿ ಗೆ ₹150, ದ್ರಾಕ್ಷಿ ಕೆ.ಜಿ ಗೆ ₹120, ಕಿತ್ತಳೆ ಕೆ.ಜಿಗೆ ₹80 ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಕೋವಿಡ್‌ 3ನೇ ಅಲೆ ಹೆಚ್ಚುತ್ತಿರುವುದರಿಂದ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಗೆ ನಿರೀಕ್ಷೆಯಂತೆ ವ್ಯಾಪಾರ ಇಲ್ಲ. ವಾರಾಂತ್ಯಕರ್ಫ್ಯೂ ಇರುವುದರಿಂದ ಹಬ್ಬ ಆಚರಣೆಗೆ ಜನರ ಆಸಕ್ತಿ ಕಡಿಮೆ ಇದೆ ಎಂದು ಹೂವಿನ ವ್ಯಾಪಾರಿ ಗೌರಮ್ಮ ಹೇಳಿದರು.

ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಬಹುತೇಕ ವರ್ತಕರು ಮತ್ತು ಗ್ರಾಹಕರು ಮಾಸ್ಕ್‌ ಧರಿಸಿರಲಿಲ್ಲ. ಅಂತರ ಪಾಲನೆ ಇರಲಿಲ್ಲ. ಸಂಜೆ ವೇಳೆ ಜನ ಜಂಗುಳಿ ಹೆಚ್ಚಾದ್ದರಿಂದ ನಗರದ ಕಟ್ಟಿನಕೆರೆ ಮಾರುಕಟ್ಟೆ ರಸ್ತೆ, ಮಹಾವೀರ ವೃತ್ತ, ಕಸ್ತೂರಬಾ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.