ADVERTISEMENT

ಅರ್ಚಕನ ಕುಟುಂಬದ ಮೇಲೆ ಹಲ್ಲೆ: ಕೊರನಾ ಹಿನ್ನೆಲೆ ದೇವರ ಉತ್ಸವಕ್ಕೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:32 IST
Last Updated 29 ಏಪ್ರಿಲ್ 2021, 15:32 IST
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ಶ್ರೀಕಾಂತ್‌ ಮತ್ತು ತಾಯಿ ಶಾಂತಮ್ಮ
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ಶ್ರೀಕಾಂತ್‌ ಮತ್ತು ತಾಯಿ ಶಾಂತಮ್ಮ   

ಹಾಸನ: ಕೋವಿಡ್‌ ಹಿನ್ನೆಲೆಯಲ್ಲಿ ದೇವರ ಉತ್ಸವ ಮಾಡಲು ಹಿಂದೇಟು ಹಾಕಿದ ಅರ್ಚಕ ಮತ್ತು ಅವರ ತಾಯಿ ಮೇಲೆ ತಾಲ್ಲೂಕಿನ ಕಬ್ಬತ್ತಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

ಗ್ರಾಮದ ಅರ್ಚಕ ಶ್ರೀಕಾಂತ್ ಮತ್ತು ತಾಯಿ ಶಾಂತಮ್ಮ ಹಲ್ಲೆಗೆ ಒಳಗಾಗಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಕುಟುಂಬವೊಂದರ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಹಾಗಾಗಿ ರಂಗನಾಥಸ್ವಾಮಿ ದೇವರ ಮೆರವಣಿಗೆ ಮಾಡುವಂತೆ ಅರ್ಚಕ ಶ್ರೀಕಾಂತ್‌ ಅವರನ್ನು ಗ್ರಾಮದ ದೇವೇಗೌಡ, ಆನಂದ್, ನಾಗಣ್ಣ, ಶ್ರೀನಿವಾಸಚಾರ್‌ ಮತ್ತು ಮಹೀಂದ್ರ ಕೇಳಿಕೊಂಡಿದ್ದಾರೆ.

ADVERTISEMENT

"ಲಾಕ್‌ಡೌನ್‌ನಿಂದಾಗಿ ದೇವಸ್ಥಾನ ಬಂದ್‌ ಮಾಡಿದ್ದು, ಇಂತಹ ಸಮಯದಲ್ಲಿ ದೇವರ ಉತ್ಸವ ಮಾಡಲು ಆಗುವುದಿಲ್ಲವೆಂದು' ಶ್ರೀಕಾಂತ್‌ ನಿರಾಕರಿಸಿದ್ದಾರೆ. ಈ ವಿಚಾರಕ್ಕೆ ಮಾತಿನ ಚಕಮಕಿಯೂ ನಡೆದಿದೆ.

ಬುಧವಾರ ಬೆಳಿಗ್ಗೆ ಶ್ರೀಕಾಂತ್‌ ಕುಟುಂಬ ಡೇರಿಗೆ ಹಾಲು ಹಾಕಲು ಹೋದಾಗ ಗ್ರಾಮದ ದೇವೇಗೌಡ, ಆನಂದ್‌, ನಾಗಣ್ಣ, ಶ್ರೀನಿವಾಸಚಾರ್‌ ಮತ್ತು ಮಹೀಂದ್ರ ಗಲಾಟೆ ಮಾಡಿದ್ದಾರೆ. ಉತ್ಸವ ಮಾಡದ ಕಾರಣ ಹಾಲನ್ನು ಪಡೆಯುವುದಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. ಈ ಗಲಾಟೆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಹೋದ ಶ್ರೀಕಾಂತ್‌ ಅವರ ಮೊಬೈಲ್‌ ಕಿತ್ತುಕೊಂಡು ಪುಡಿ ಮಾಡಿದ್ದಾರೆ. ಅವರ ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ.

‘ನಮ್ಮ ಕುಟುಂಬಕ್ಕೆ ಗ್ರಾಮದ ಯಾರೊಬ್ಬರು ಸಹಾಯ ಮಾಡದಂತೆ ಹಲ್ಲೆ ಮಾಡಿದ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮನೆಗೆ ಕುಡಿಯುವ ನೀರು ಬರದಂತೆ ಬಂದ್‌ ಮಾಡಿಸಿದ್ದಾರೆ. ಕೋವಿಡ್ ನಿಯಮ ಪಾಲಿಸಿದ್ಧೇವೆ. ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು’ ಎಂದು ಶ್ರೀಕಾಂತ್‌ ಆಗ್ರಹಿಸಿದರು.

ಗೊರೊರು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.