ADVERTISEMENT

ದಸರಾ ವೈಭವ ಸಾರುವ ಗೊಂಬೆಗಳ ಪ್ರದರ್ಶನ

ಸಕಲೇಶಪುರ: 13 ವರ್ಷಗಳಿಂದ ಗೊಂಬೆಗಳನ್ನು ಕೂರಿಸುತ್ತಿರುವ ಪುಷ್ಪಲತಾ ನಂದಕುಮಾರ್‌

ಜಾನೆಕೆರೆ ಆರ್‌.ಪರಮೇಶ್‌
Published 24 ಅಕ್ಟೋಬರ್ 2020, 2:13 IST
Last Updated 24 ಅಕ್ಟೋಬರ್ 2020, 2:13 IST
ಸಕಲೇಶಪುರದ ಪುಷ್ಪಲತಾ ನಂದಕುಮಾರ್‌ ಮನೆಯಲ್ಲಿ ಜಂಬೂಸವಾರಿಯನ್ನು ನೆನಪಿಸುವ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ
ಸಕಲೇಶಪುರದ ಪುಷ್ಪಲತಾ ನಂದಕುಮಾರ್‌ ಮನೆಯಲ್ಲಿ ಜಂಬೂಸವಾರಿಯನ್ನು ನೆನಪಿಸುವ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ   

ಸಕಲೇಶಪುರ: ಮಲೆನಾಡಿನ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಮನೆಗಳಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ತೀರಾ ವಿರಳ. ಆದರೆ, ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನ ಮುಂಭಾಗದ ನಿವಾಸಿ ಪುಷ್ಪಲತಾ ನಂದಕುಮಾರ್‌ ಕಳೆದ ಐದು ವರ್ಷಗಳಿಂದ ಮೈಸೂರು ದಸರಾ ವೈಭವವನ್ನು ಸಾರುವ ಗೊಂಬೆಗಳ ಪ್ರದರ್ಶನ ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ಕಣ್ಣಿಗೆ ಕಟ್ಟುವಂತೆ ಗೊಂಬೆಗಳ ಮೂಲಕ ಸಿಂಗರಿಸಲಾಗಿದೆ. ಒಂದು ಅಂಬಾರಿಯಲ್ಲಿ ಮಹಾರಾಜ, ಮತ್ತೊಂದು ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಆನೆಗಳ ಗೊಂಬೆಗಳು, ಸೈನಿಕರು, ಗಜಪಡೆ, ಒಂಟೆ, ಕುದುರೆ, ಮಾವುತರ ಗೊಂಬೆಗಳು ಆಕರ್ಷಣೀಯವಾಗಿವೆ.

ಇದಲ್ಲದೆ, ವೃದ್ಧ ದಂಪತಿ ಪೂಜಾ ಕಾರ್ಯಗಳನ್ನು ನಡೆಸುವುದು, ಅಯ್ಯಂಗಾರ್‌ ಸಂಪ್ರದಾಯದ ವಧು ವರರು, ಹತ್ತಾರು ಬಗೆಯ ಗಣಪತಿ, ಗೋಪಿಕಾ ಸ್ತ್ರೀಯರ ಜೊತೆ ಕೃಷ್ಣ ನೃತ್ಯ, ಮೈಸೂರು ಮಹಾರಾಜ, ಮಹಾರಾಣಿ, ವಿಷ್ಟುವಿನ ದಶಾವತಾರ, ನವ ದುರ್ಗೆಯರು 10ನೇ ದಿನದ ನಂತರ ಚಾಮುಂಡೇಶ್ವರಿ ಮಹಿಷಾಸುರನ ವಧೆ ಮಾಡುವುದು, ಅಷ್ಟಲಕ್ಷ್ಮಿಯರ ಗೊಂಬೆಗಳನ್ನು ಒಂದು ಸಾಲಿನಲ್ಲಿಟ್ಟಿದ್ದಾರೆ. ರಾಮನ ಪಟ್ಟಾಭಿಷೇಕ ಸಮಾರಂಭ, ರಾಮ, ಸೀತೆ, ಜಯ, ವಿಜಯ, ಲಕ್ಷ್ಮಣ, ಬ್ರಾಹ್ಮಣ ದಂಪತಿ, ಸಂಗೀತಗಾರರು, ವಿದ್ವಾಂಸರು, ಪಟ್ಟಾಭಿಷೇಕ ವೀಕ್ಷಣೆಗೆ ದೇಶ ವಿದೇಶದಿಂದ ಬಂದ ಪ್ರಜೆಗಳು, ವಾದ್ಯಗೋಷ್ಠಿ, ವಾದ್ಯದ ಶಬ್ದಕ್ಕೆ ಬೆದರಿ ಓಡುತ್ತಿರುವ ಪ್ರಾಣಿಗಳು, ಪಟ್ಟಾಭಿಷೇಕ ನಂತರ ಕೃಷ್ಣನ ಭೋಜನ ಮಾಡುತ್ತಿರುವ ದೃಶ್ಯಗಳನ್ನು ಸಾರುವ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ.

ADVERTISEMENT

‘ಕೃಷ್ಣ ನಮ್ಮ ಮನೆ ದೇವರು. ಹಾಗಾಗಿ ಕೃಷ್ಣನ ಗೊಂಬೆಯನ್ನು ಎತ್ತರದಲ್ಲಿ ಇಡಲಾಗಿದೆ. 13 ವರ್ಷಗಳ ಹಿಂದೆ ಮದುವೆಯಾದಾಗ ತವರು ಮನೆಯಿಂದ ಕೊಟ್ಟಿದ್ದ ಪಟ್ಟದ ಗೊಂಬೆಗಳನ್ನು ಇಲ್ಲಿ ಇಟ್ಟಿದ್ದೇನೆ. ಅಯ್ಯಂಗಾರ್‌ ಸಂಪ್ರದಾಯದಲ್ಲಿ ದಸರಾ ಸಂದರ್ಭದಲ್ಲಿ ಯಾವುದೇ ಗೊಂಬೆಗಳನ್ನು ಇಡದೇ ಇದ್ದರೂ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸಲೇಬೇಕು. ಮದುವೆಯಾದ ವರ್ಷದಿಂದಲೂ ಗೊಂಬೆಗಳನ್ನು ಇಟ್ಟು 9 ದಿನ ಪೂಜೆ ಮಾಡುವುದನ್ನು ಮುಂದುವರೆಸಿಕೊಂಡು ಬಂದಿದ್ದೇವೆ’ ಎಂದು ಪುಷ್ಪಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೆವು. ಈ ಬಾರಿ ಕೋವಿಡ್–19 ಕಾರಣ ಸಾರ್ವಜನಿಕ ಪ್ರವೇಶ ನಿಷೇಧ ಮಾಡಿದ್ದೇವೆ’ ಎಂದು ನಂದಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.