ಕೊಣನೂರು : ಕಡೆ ಕಾರ್ತೀಕದ ಅಂಗವಾಗಿ ಕೊಣನೂರು ಮತ್ತು ದಕ್ಷಿಣಕಾಶಿ ಖ್ಯಾತಿಯ ರಾಮನಾಥಪುರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಎಲ್ಲಾ ದೇವಾಲಯಗಳು ದೀಪದ ಬೆಳಕಿನಲ್ಲಿ ಜಗಮಗಿಸಿದವು.
ಕೊಣನೂರು ಪಟ್ಟಣದ ಪ್ರಸಿದ್ಧ ಕೊತ್ತಲ ಗಣಪತಿ ಸ್ವಾಮಿ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ 29ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆಯಿಂದಲೆ ಗಣಪತಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಪ್ರತಿ ವರ್ಷದಂತೆ ಗಣಪತಿಯ ಮೂರ್ತಿಗೆ ಮಾಡಿದ್ದ ಬೆಣ್ಣೆ ಅಲಂಕಾರ ಭಕ್ತರ ಮನಸೂರೆಗೊಂಡಿತು. ಸಂಜೆ 7 ಗಂಟೆಯಿಂದ ದೇವಾಲಯದ ಆವರಣದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಆಗಮಿಸಿದ ನೂರಾರು ಭಕ್ತರು ದೀಪಹಚ್ಚಿ ನಮಿಸಿದರು. ಪ್ರಸಾದ ಸ್ವೀಕರಿಸಿದರು.
ಕೊಣನೂರಿನ ಎಲ್ಲಾ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ಮತ್ತು ಭಕ್ತರು ದೀಪ ಹಚ್ಚುವ ದೃಶ್ಯ ಕಂಡುಬಂತು. ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಲಕ್ಷ್ಮಣೇಶ್ವರಸ್ವಾಮಿ ದೇವಾಲಯದಲ್ಲಿ ಶನಿವಾರ ಲಕ್ಷ ದೀಪೋತ್ಸವ ನಡೆಯಿತು. ರಾಮನಾಥಪುರ, ಮಲ್ಲರಾಜಪಟ್ಟಣ, ಮಲ್ಲಿನಾಥಪುರ, ಗಂಗೂರು ಸೇರಿದಂತೆ ವಿವಿಧೆಡೆಗಳಿಂದ ಬಂದ ನೂರಾರು ಭಕ್ತರು ಲಕ್ಷ್ಮಣೇಶ್ವರ ಮತ್ತು ಉರ್ಮಿಳಾದೇವಿಯ ದರ್ಶನ ಪಡೆದರು. ಪ್ರಸಾದ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.