ADVERTISEMENT

ಅಂತರ ಜಿಲ್ಲಾ ಸರಗಳ್ಳರಿಬ್ಬರ ಬಂಧನ

ಚಾಮರಾಜನಗರ ಜಿಲ್ಲೆ ಆರೋಪಗಳಿಂದ ₹ 30 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 4:07 IST
Last Updated 27 ಏಪ್ರಿಲ್ 2021, 4:07 IST
ಬಂಧಿತ ಆರೋಪಗಳಿಂದ ವಶಪಡಿಸಿಕೊಂಡಿರುವ ಮಾಂಗಲ್ಯ ಸರಗಳೊಂದಿಗೆ ಪೊಲೀಸ್‌ ಅಧಿಕಾರಿಗಳು
ಬಂಧಿತ ಆರೋಪಗಳಿಂದ ವಶಪಡಿಸಿಕೊಂಡಿರುವ ಮಾಂಗಲ್ಯ ಸರಗಳೊಂದಿಗೆ ಪೊಲೀಸ್‌ ಅಧಿಕಾರಿಗಳು   

ಹಾಸನ: ಪಾದಚಾರಿ ಒಂಟಿ ಮಹಿಳೆಯ ರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಅಪಹರಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಇಬ್ಬರು ಸರಗಳ್ಳರನ್ನು ಚನ್ನರಾಯಪಟ್ಟಣ ಠಾಣೆ ಪೊಲೀಸರು ಬಂಧಿಸಿ ₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕು ಸಾಗಡೆ ಗ್ರಾಮದ ಗೋಪಾಲ (39) ಹಾಗೂ ರಮೇಶ್ (45) ಬಂಧಿತರು. ಇಬ್ಬರು ಸಂಬಂಧಿಕರಾಗಿದ್ದು, ಮದ್ಯ ಸೇವನೆ ಸೇರಿದಂತೆ ದುಶ್ಚಟಗಳಿಗೆ ಹಣ ಹೊಂದಿಸಲು ಚಿನ್ನಾಭರಣ ದೋಚುವ ಕಾಯಕದಲ್ಲಿ ತೊಡಗಿದ್ದರು. ಇವರ ವಿರುದ್ಧ ಹಾಸನ ಸೇರಿದಂತೆ ಅಂತರ ಜಿಲ್ಲೆಗಳಲ್ಲಿ 22 ಮಾಂಗಲ್ಯ ಸರ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2020ರ ಸೆ. 29ರಂದು ಚನ್ನರಾಯ ಪಟ್ಟಣ ತಾಲ್ಲೂಕು ಗೌಡರಹಳ್ಳಿ ಗ್ರಾಮದ ಇಂದ್ರಮ್ಮ ಎಂಬುವವರು ತೋಟದ ಕೆಲಸಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಇಂದ್ರಮ್ಮ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಅಪಹರಣಕ್ಕೆ ಯತ್ನಿಸಿದ್ದ. ಆಗ ಮಹಿಳೆ ಪ್ರತಿರೋಧ ಒಡ್ಡಿದಾಗ ಅವರನ್ನು ಕೆಳಕ್ಕೆ ಕೆಡವಿ, ಹೊಡೆದು 30 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದನು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹಿರೀಸಾವೆ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು’ ಎಂದು ಹೇಳಿದರು.

ADVERTISEMENT

‘ಏ. 18ರಂದು ಹಿರೀಸಾವೆಯ ಕಾಲೇಜು ರಸ್ತೆಯಲ್ಲಿರುವ ರಾಮದೇವ್ ಜ್ಯುವೆಲರಿಮುಂದೆ ಅನುಮಾನಾಸ್ಪದ ವಾಗಿನಿಂತಿದ್ದ ಇಬ್ಬರನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಇಂದ್ರಮ್ಮ ಅವರ ಮಾಂಗಲ್ಯ ಸರ ದೋಚಿರುವುದು ಮಾತ್ರವಲ್ಲದೆ ವಿವಿಧೆಡೆ 22 ಮಾಂಗಲ್ಯ ಸರ ದೋಚಿರುವುದಾಗಿ ಒಪ್ಪಿಕೊಂಡಿ ದ್ದಾರೆ. ಮಂಡ್ಯ, ಚಾಮರಾಜನಗರ ಹಾಗೂ ಹಾಸನ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣದ ಆರೋಪಿಗಳು ಇವರೇ’ ಎಂದರು.

‘ಆಟೊ ಚಾಲಕನಾಗಿರುವ ಗೋಪಾಲ ಕಳ್ಳತನ ಪ್ರಕರಣದಲ್ಲಿ ಈಗಾ ಗಲೇ ಸೆರೆಮನೆ ವಾಸ ಅನುಭವಿ ಸಿದ್ದ. ಜಾಮೀನಿನ ಮೇಲೆ ಬಿಡುಗಡೆ ಯಾದ ಬಳಿಕ ತನ್ನ ಕಳ್ಳತನ ವೃತ್ತಿಗೆ ಎಳನೀರು ವ್ಯಾಪಾರ ಮಾಡಿಕೊಂಡಿದ್ದ ರಮೇಶ್‍ನನ್ನು ಸೇರಿಸಿಕೊಂಡಿದ್ದ. ಸಿಗರೇಟ್, ಗುಟ್ಕಾ, ಮದ್ಯ ಹಾಗೂ ಜೂಜಾಟಗಳ ದಾಸರಾಗಿದ್ದ ಇವರು ಮಹಿಳೆಯರ ಮಾಂಗಲ್ಯ ಸರ ಕಳವು ಮಾಡುವುದನ್ನೇ ಕಾಯಕವಾಗಿಸಿ ಕೊಂಡಿದ್ದರು’ ಎಂದು ಹೇಳಿದರು.

ಗ್ರಾಮೀಣ ಭಾಗದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬಟ್ಟೆ ತೊಳೆ ಯಲು, ದನ ಮೇಯಿಸಲು, ಜಮೀನು ಕೆಲಸಕ್ಕೆ ಹೋಗುವ ಸ್ತ್ರೀಯರ ಚಿನ್ನದ ಸರ ಅಪಹರಿಸುತ್ತಿದ್ದರು ಎಂದರು.

‘ಬಂಧಿತರಿಂದ 660 ಗ್ರಾಂ ತೂಕದ 30 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ, ಚಾಮರಾಜನಗರ ಜಿಲ್ಲೆ ಸಂತೆ ಮರಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಹೋಂಡಾ ಯೂನಿಕಾರ್ನ್ ಬೈಕ್‍ನ್ನು ವಶಪಡಿಸಿಕೊಂಡಿದ್ದು, ಆರೋ ಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದರು.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹೊಳೆನರಸೀಪುರ ಡಿವೈಎಸ್ಪಿ ಬಿ.ಬಿ. ಲಕ್ಷ್ಮೇಗೌಡ, ಚನ್ನರಾಯಪಟ್ಟಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಕೆ. ಸುಬ್ರಹ್ಮಣ್ಯ, ಪಿಎಸ್‍ಐ ವಿನೋದ್ ರಾಜ್,ಹಿರಿಸಾವೆ ಪೊಲೀಸ್‌ ಠಾಣೆಯ ಪಿಎಸ್‌ಐ ಭವಿತ ಹಾಗೂ ಕಾಲ್‌ಸ್ಟೆಬಲ್‌ಗಳಾದ ಎಚ್‌.ಸಿ. ಕುಮಾರಸ್ವಾಮಿ, ಜವರೇಗೌಡ, ಸುರೇಶ, ಮಹೇಶ, ಜಯಪ್ರಕಾಶನಾರಾಯಣ, ಎಚ್‌.ಎಸ್‌. ಗಿರೀಶ್‌, ಚಂದ್ರೇಶ, ಮಂಜುನಾಥ್‌, ಶಶಿಧರ್‌, ಪೀರ್‌ಖಾನ್‌, ಪರಮೇಶ್ ಅವರ ಕಾರ್ಯವನ್ನು ಎಎಸ್ಪಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.