ADVERTISEMENT

ಅಭಿವೃದ್ಧಿ ಕಾಮಗಾರಿಯ ವೇಗ ಹೆಚ್ಚಿಸಿ: ಶಾಸಕ ಸ್ವರೂಪ್

ಬೂವನಹಳ್ಳಿಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಸ್ವರೂಪ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:29 IST
Last Updated 12 ಸೆಪ್ಟೆಂಬರ್ 2025, 4:29 IST
ಹಾಸನ ಹೊರವಲಯದ ಬೂವನಹಳ್ಳಿಗೆ ಗುರುವಾರ ಭೇಟಿ ನೀಡಿದ ಶಾಸಕ ಸ್ವರೂಪ್‌ ಪ್ರಕಾಶ್, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹಾಸನ ಹೊರವಲಯದ ಬೂವನಹಳ್ಳಿಗೆ ಗುರುವಾರ ಭೇಟಿ ನೀಡಿದ ಶಾಸಕ ಸ್ವರೂಪ್‌ ಪ್ರಕಾಶ್, ಅಧಿಕಾರಿಗಳಿಂದ ಮಾಹಿತಿ ಪಡೆದರು.   

ಹಾಸನ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 1ರ ಬೂವನಹಳ್ಳಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳ ಕುರಿತು ಶಾಸಕ ಸ್ವರೂಪ್ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಗುರುವಾರ ವಿಶೇಷ ಸಭೆ ನಡೆಯಿತು.

ಗ್ರಾಮದಲ್ಲಿನ ಮೂಲ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಈ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ನೂತನವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿರುವ ಬೂವನಹಳ್ಳಿಯ ಸಮಸ್ಯೆಗಳನ್ನು ಸ್ಥಳೀಯ ನಿವಾಸಿಗಳು ತೆರೆದಿಟ್ಟರು.

ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಸ್ವಚ್ಛತೆ ಕುರಿತಂತೆ ಸ್ಥಳೀಯರು ಬೇಡಿಕೆಗಳನ್ನು ಮಂಡಿಸಿದರು. ಸಾರ್ವಜನಿಕರ ಮನವಿ ಆಲಿಸಿದ ಶಾಸಕ ಸ್ವರೂಪ್‌, ಮೂಲಸೌಕರ್ಯಗಳ ಕೊರತೆಯಿಂದ ಜನಜೀವನ ಹಾಳಾಗಬಾರದು. ಸಂಬಂಧಪಟ್ಟ ಇಲಾಖೆಯವರು ಶೀಘ್ರ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಅಭಿವೃದ್ಧಿ ಕಾಮಗಾರಿಗಳಿಗೆ ಅನಗತ್ಯ ವಿಳಂಬ ಆಗದಂತೆ ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆ ಅಭಿವೃದ್ಧಿ ಯೋಜನೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಸ್ವರೂಪ್, ಗ್ರಾಮದ ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ. ಬೂವನಹಳ್ಳಿಯನ್ನು ಅಭಿವೃದ್ಧಿಯ ಮಾದರಿ ಕೇಂದ್ರವಾಗಿ ರೂಪಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ:

ಬೂವನಹಳ್ಳಿಯ ಕೆರೆಯ ಅಭಿವೃದ್ದಿ ವಿಳಂಬ ಆಗುತ್ತಿರುವ ಬಗ್ಗೆ ಸ್ಥಳೀಯರು ಅಹವಾಲು ಸಲ್ಲಿಸಿದ್ದರಿಂದ ಶಾಸಕ ಸ್ವರೂಪ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

‘ಕೆರೆಗಳು ಗ್ರಾಮೀಣ ಜನರ ಜೀವನಾಧಾರ. ಇವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ನೀರಾವರಿಗೂ, ಪರಿಸರ ಸಮತೋಲನಕ್ಕೂ ಅತ್ಯವಶ್ಯಕ. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆ ತೊಡಕು ತೆರವು, ಬಂಡೆಕಟ್ಟು ಬಲಪಡಿಸುವುದು, ನೀರಿನ ಹರಿವು ಸುಗಮಗೊಳಿಸುವುದು ಹಾಗೂ ಸುತ್ತಲಿನ ಸ್ವಚ್ಛತೆ ಕಾಪಾಡುವ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರತಿ ಹಂತದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಜನತೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಯರಾಂ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ಬೊಮ್ಮೇಗೌಡ, ಮುಖಂಡರಾದ ತುಳಸಿರಾಂ, ಮಲ್ಲೇಶ್, ಕರಿಯಯ್ಯ, ಲಕ್ಷ್ಮಣ್, ಸಂಕೇನಹಳ್ಳಿ ವೇಣು, ಸೋಮೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

ಸ್ಮಶಾನ ಜಾಗ ಪರಿಶೀಲನೆ

ಬೂವನಹಳ್ಳಿಯಲ್ಲಿ ಸ್ಮಶಾನ ಜಾಗ ಕುರಿತ ಸಮಸ್ಯೆ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಸ್ಥಳೀಯರಿಂದ ಬಂದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಲು ಸೂಚಿಸಿದರು. ಶವಗಳ ಅಂತ್ಯಕ್ರಿಯೆ ವೇಳೆ ಯಾವ ತೊಂದರೆಯೂ ಆಗಬಾರದೆಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ ಜಾಗದ ಗಡಿ ನಿಗದಿ ರಸ್ತೆ ಸಂಪರ್ಕ ಶೌಚಾಲಯ ಕುಡಿಯುವ ನೀರು ಹಾಗೂ ಬೆಳಕು ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯವಿದ್ದರೆ ಗ್ರಾಮದಲ್ಲಿ ಸ್ಮಶಾನ ಜಾಗಕ್ಕಾಗಿ ಮೀಸಲಿರುವ 3 ಎಕರೆ 18 ಗುಂಟೆ ಜಾಗದ ಸರ್ವೆ ಮುಗಿಸಿ ಪಾಲಿಕೆಗೆ ಹಸ್ತಾಂತರಿಸಿ. ಕಾಂಪೌಂಡ್ ಇಲ್ಲವೇ ತಂತಿ ಬೇಲಿ ಹಾಕಿ ಮೂಲಸೌಕರ್ಯ ನೀಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.