ಚನ್ನರಾಯಪಟ್ಟಣ: ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಕುರಿತು ಅವಹೇಳನ ಮಾಡುವುದು ತರವಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಸತ್ಯಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಕ್ಷೇತ್ರ. ರಾಜ್ಯ ಸೇರಿ ದೇಶದ ನಾನಾ ಭಾಗಗಳಿಂದ ಶ್ರೀಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಜಲ ಸಂರಕ್ಷಣೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಮದ್ಯವರ್ಜನ ಶಿಬಿರ ಆಯೋಜಿಸಿರುವುದು ಸೇರಿ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.
ಇಂಥ ಕ್ಷೇತ್ರದ ಕುರಿತು ಅಪಚಾರ ಎಸಗಲಾಗುತ್ತಿದೆ. ಕೆಲವರು ಅನಾಮಿಕ ವ್ಯಕ್ತಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈಗ ಅನಾಮಿಕ ವ್ಯಕ್ತಿಯ ಬಣ್ಣ ಬಯಲಾಗಿದೆ. ಕ್ಷೇತ್ರದ ಕುರಿತು ಅಪಪ್ರಚಾರ ಮಾಡಿದ ಅನಾಮಿಕ ವ್ಯಕ್ತಿಗೆ ಶಿಕ್ಷೆ ವಿಧಿಸಬೇಕು. ಧರ್ಮಸ್ಥಳ ಕ್ಷೇತ್ರದ ಕುರಿತು ಅನಗತ್ಯವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಷಡ್ಯಂತ್ರ ಖಂಡಿಸಿ ಜೆಡಿಎಸ್ ಪಕ್ಷದಿಂದ ಸತ್ಯಯಾತ್ರೆ ನಡೆಸಲಾಗಿದೆ. ಘಟನೆ ಕುರಿತು ಎನ್‍ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಪರಮಕೃಷ್ಣೇಗೌಡ, ವಿ.ಎನ್. ರಾಜಣ್ಣ, ಗಂಗಾಧರ್, ಶರತ್‍ಕುಮಾರ್, ಪುಟ್ಟರಾಜು, ಪ್ರವೀಣ್, ವೆಂಕಟೇಶ್, ವಿ.ಎನ್. ಮಂಜುನಾಥ, ರೈತಸಂಘದ ಮುಖಂಡ ಮೀಸೆ ಮಂಜಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.