ಚನ್ನರಾಯಪಟ್ಟಣದಲ್ಲಿ ಅಂಗವಿಕಲರಿಗೆ ಅಗತ್ಯ ಸಲಕರಣೆಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಹಸ್ತಾಂತರಿಸಿದರು
ಚನ್ನರಾಯಪಟ್ಟಣ: ಅಂಗವಿಕಲರು ಎಂಬ ಕೀಳರಿಮೆ ಬೇಡ. ಬದುಕಿನಲ್ಲಿ ಅತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಅಗತ್ಯ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ 130 ಅಂಗವಿಕಲರಿಗೆ ಅಂದಾಜು ₹14.30 ಲಕ್ಷ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಅನುಕೂಲ ಕಲ್ಪಿಸುತ್ತಿವೆ. ಉತ್ತಮ ಬದುಕು ಕಟ್ಟಿಕೊಳ್ಳಲು ಸರ್ಕಾರ ನೀಡುವ ಯೋಜನೆಗಳು ಪ್ರಯೋಜನವಾಗಿವೆ. ಇದರಿಂದ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಅವಕಾಶವಾಗುತ್ತದೆ. ಪ್ರತಿ ವರ್ಷ ಅಂಗವಿಕಲರಿಗೆ ಸವಲತ್ತು ನೀಡಲಾಗುತ್ತಿದೆ’ ಎಂದರು.
‘ತಾಲ್ಲೂಕಿನಲ್ಲಿ ಇನ್ನೂ ಹಲವು ಅಂಗವಿಕಲರು ಇದ್ದು, ಅವರಿಗೆ ಇನ್ನೂ 30 ದಿನದೊಳಗೆ ಅಗತ್ಯ ಸಲಕರಣೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಂಬಂಧಪಟ್ಟವರು ಅಂಗವಿಕಲ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಹೇಳಿದರು.
‘ಶಾಸಕರ ಅನುದಾನದಲ್ಲಿ ಇದುವರೆಗೆ 250 ಅಂಗವಿಕಲರಿಗೆ ಮೂರು ಚಕ್ರದ ಮೋಟರ್ ಸೈಕಲ್ ಹಸ್ತಾಂತರಿಸಿದ್ದು, ಇನ್ನು ಬೇಡಿಕೆ ಇದೆ. ಅನುದಾನದ ಲಭ್ಯತೆ ಆಧರಿಸಿ ಮೋಟರ್ ಸೈಕಲ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಅಧಿಕಾರಿಗಳಾದ ಅಭಿಷೇಕ್‍ಕುಮಾರ್, ಸುಬ್ರಹ್ಮಣ್ಯ, ಮುಖಂಡ ಶಂಕರಲಿಂಗೇ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.