ADVERTISEMENT

ಲಿಂಗ, ಧರ್ಮದ ಆಧಾರದಲ್ಲಿ ತಾರತಮ್ಯ ಸಲ್ಲ

ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ದೇವರಾಜು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:32 IST
Last Updated 11 ಡಿಸೆಂಬರ್ 2025, 2:32 IST
ಹಾಸನದ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ನ್ಯಾಯಾಧೀಶ ದೇವರಾಜು ಉದ್ಘಾಟಿಸಿದರು
ಹಾಸನದ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ನ್ಯಾಯಾಧೀಶ ದೇವರಾಜು ಉದ್ಘಾಟಿಸಿದರು   

ಹಾಸನ: ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಕಾನೂನಿನ ವ್ಯಾಪ್ತಿಯಲ್ಲಿ ಜೀವನವನ್ನು ನಡೆಸುವ, ಮಾತನಾಡುವ, ಸೂಕ್ತ ಧರ್ಮ ಆಚರಣೆ ಮಾಡುವುದು ಸೇರಿದಂತೆ ಹಲವು ಹಕ್ಕುಗಳಿವೆ. ಯಾವುದೇ ವ್ಯಕ್ತಿಗೆ ಲಿಂಗದ ಆಧಾರದ ಮೇಲೆ ಇಲ್ಲವೇ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ಹೇಳಿದರು.

ನಗರದ ಸಾಲಗಾಮ ರಸ್ತೆ ಬಳಿ ಇರುವ ಎಂ. ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘದ ಜಿಲ್ಲಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ. ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜುಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವನಿಗೆ ಅವನ ಹುಟ್ಟಿನಿಂದಲೇ ದೊರೆಯುವ ಹಕ್ಕುಗಳೆಂದರೇ ಬದುಕು, ಮಾತನಾಡುವುದು. ಧರ್ಮ, ಭಾಷೆ, ಉದ್ಯೋಗ ಇವುಗಳನ್ನು ಯಾರೂ ಮೊಟಕು ಮಾಡಬಾರದು. ಇವುಗಳನ್ನು ಕಾಪಾಡುವುದು ನಮ್ಮ ಸಂವಿಧಾನ ಮತ್ತು ಸಮಾಜದ ಜವಾಬ್ದಾರಿ ಎಂದು ತಿಳಿಸಿದರು.

ADVERTISEMENT

‘ಹದಿಹರೆಯದಲ್ಲಿ ಆಕರ್ಷಣೆ ಆಗುವುದು ಸಹಜವಾಗಿದೆ. ಸಮಾಜವನ್ನು ಮುಂದೆ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಒಮ್ಮೆ ಯೋಚಿಸಬೇಕು. ನಾವು ಬಂದಿರುವ ಉದ್ದೇಶ, ಗುರಿ ಏನು ಎಂಬುದನ್ನು ನಿಶ್ಚಯಿಸಿಕೊಂಡು, ಛಲದಿಂದ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಎ.ಪಿ.ಸಿ.ಆರ್ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್ ಮಾತನಾಡಿ, ‘ಸಮಾಜದಲ್ಲಿ ಮಾನವನಾಗಿ ಜನಿಸಿದ ಮೇಲೆ ಮಾನವ ಗುಣ ಬೆಳೆಸಿಕೊಳ್ಳಬೇಕು. ಪ್ರತಿ ಹಂತದಲ್ಲಿ ಮಾನವ ಹಕ್ಕುಗಳು ಅನ್ವಯಿಸುತ್ತವೆ. ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ರಕ್ಷಣೆ ಮಾಡುವ ಕೆಲಸವನ್ನು ಕಾನೂನು ವಿದ್ಯಾರ್ಥಿಗಳು ತಾವೂ ಅನುಸರಿಸಿ, ಬೇರೆಯವರಿಗೂ ತಿಳಿಸಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ. ಶ್ರೀನಿವಾಸ್, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಶೀನಾ ಥಾಮಸ್, ವಕೀಲ ಅನ್ನದ್ ಪಾಳ್ಯ, ಚಿಂತಕ ಎಚ್.ಕೆ. ವಿವೇಕಾನಂದ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಸ್. ಶರಣ್ಯ ಉಪಸ್ಥಿತರಿದ್ದರು. ಸಹನಾ ನಿರೂಪಿಸಿದರು. ಉಷಾ ಪ್ರಾರ್ಥಿಸಿದರು.

ಬೇಲೂರಿನಲ್ಲಿ ಮಾನವ ಹಕ್ಕು ದಿನಾಚರಣೆಯನ್ನು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಉದ್ಘಾಟಿಸಿದರು 
ಸಂವಿಧಾನದಲ್ಲಿ ಗೌರವಯುತ ಜೀವನ ಮಾಡುವ ಎಲ್ಲ ಹಕ್ಕುಗಳಿದ್ದು ಅದನ್ನು ಯಾರೂ ಮೊಟಕು ಮಾಡಬಾರದು. ಮೊಟಕು ಮಾಡುವುದನ್ನು ತಡೆಯುವುದೇ ಮಾನವ ವರ್ಗ.
ದೇವರಾಜು ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ

ಸಮಾನತೆ ಸ್ವಾತಂತ್ರ್ಯ ಎತ್ತಿಹಿಡಿಯುವ ಮಾನವ ಹಕ್ಕು’

ಬೇಲೂರು: ಮಾನವ ಹಕ್ಕುಗಳು ಜಾತಿ ಲಿಂಗ ಧರ್ಮ ಭಾಷೆ ಭೇದವಿಲ್ಲದೆ ಪ್ರತಿಯೊಬ್ಬರ ಘನತೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತವೆ ಎಂದು ಪುರಸಭೆ ಅಧ್ಯಕ್ಷೆ ಉಷಾಸತೀಶ್ ಹೇಳಿದರು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಂಭಾಗಣದಲ್ಲಿ ಮಾನವ ಹಕ್ಕು ಹೋರಾಟಗಾರರ ಒಕ್ಕೂಟ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಮಾನವ ಹಕ್ಕು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮೂಲಭೂತ ಹಕ್ಕುಗಳಾದ ಶಿಕ್ಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಿಳಿಸುವ ಮಾನವ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದರು. ಮಾನವ ಹಕ್ಕು ಹೋರಾಟಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಐ.ಎನ್.ಅರುಣ್ ಕುಮಾರ್ ಮಾತನಾಡಿ ‘ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕು ಗುಲಾಮಗಿರಿ ಮತ್ತು ಚಿತ್ರಹಿಂಸೆಯಿಂದ ಮುಕ್ತಿ ಶಿಕ್ಷಣ ಮತ್ತು ಕೆಲಸದ ಹಕ್ಕು ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇವುಗಳು ಮಾನವ ಹಕ್ಕುಗಳ ಭಾಗಗಳಾಗಿವೆ. ನಮ್ಮ ಒಕ್ಕೂಟದಿಂದ ಪ್ರತಿವರ್ಷ ಮಾನವ ಹಕ್ಕು ದಿನಾಚರಣೆಯನ್ನು ಆಚರಿಸುತ್ತಿದ್ದೇವೆ’ ಎಂದರು. ಡಾ.ನಾರಾಯಣಸ್ವಾಮಿ ಮಾತನಾಡಿ ‘ಮಾನವ ಹಕ್ಕುಗಳು ಕೇವಲ ಘೋಷಣೆಯಾಗಿ ಉಳಿಯಬಾರದು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಹಕ್ಕುಗಳನ್ನು ಚಲಾಯಿಸುವಾಗ ಇತರರ ಹಕ್ಕುಗಳನ್ನು ಗೌರವಿಸಬೇಕು’ ಎಂದು ಸಲಹೆ ನೀಡಿದರು. ಮಾನವ ಹಕ್ಕು ಹೋರಾಟಗಾರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ನಿಂಗರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೌಕರರ ಸಂಘದ ರಾಜ್ಯಘಟಕದ ಅಧ್ಯಕ್ಷೆ ವೀಣಾ ತಾಲ್ಲೂಕು ಆರೋಗ್ಯಾಧಿಕಾರಿ ವಿಜಯ್ ಮಾತನಾಡಿದರು.  ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಂಬಾಳೆ ಮಾಜಿ ಸೈನಿಕ ಒಕ್ಕೂಟದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಜಿ.ಬಿ.ವೆಂಕಟೇಶಗೌಡ ಉಪಾಧ್ಯಕ್ಷ ಬಿ.ಕೆ.ರತ್ನಾಕರ್ ಪ್ರಧಾನಕಾರ್ಯದರ್ಶಿ ಲಕ್ಷ್ಮಿನಾರಾಯಣ್ ನಗರ ಅಧ್ಯಕ್ಷ ಶಂಕರ್ ಪ್ರಸಾದ್ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ್ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾಜಯಲಕ್ಷ್ಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.