ADVERTISEMENT

ಕಸ ಸಂಗ್ರಹ ವಾಹನಕ್ಕೆ ಹಣ ನೀಡಬೇಡಿ: ಜಿಲ್ಲಾಧಿಕಾರಿ ಆರ್‌. ಗಿರೀಶ್

ಸ್ವಚ್ಛ ಸರ್ವೇಕ್ಷಣೆ ಪೋಸ್ಟರ್ ಬಿಡುಗಡೆ, ರಸ್ತೆಯಲ್ಲಿ ಕಸ ಬಿಸಾಡಿದರೆ ದಂಡ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 13:51 IST
Last Updated 2 ಮಾರ್ಚ್ 2021, 13:51 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಸ್ವಚ್ಛ ಸರ್ವೇಕ್ಷಣೆ ಪೋಸ್ಟರ್ ಬಿಡುಗಡೆ ಮಾಡಿದರು.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಸ್ವಚ್ಛ ಸರ್ವೇಕ್ಷಣೆ ಪೋಸ್ಟರ್ ಬಿಡುಗಡೆ ಮಾಡಿದರು.   

ಹಾಸನ: ಸಾರ್ವಜನಿಕರು ಮನೆಯಲ್ಲಿಯೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡಬೇಕು. ಮನೆ ಬಳಿ ಬರುವ ಕಸದ ಸಂಗ್ರಹ ವಾಹನಗಳಿಗೆ ಸಾರ್ವಜನಿಕರು ಹಣ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ವಚ್ಛ ಸರ್ವೇಕ್ಷಣೆ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದರು.

ನಗರಸಭೆಯ ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಕಸ ನೀಡದೆ ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ತೆರಳುವಾಗ ದ್ವಿಚಕ್ರ, ಕಾರುಗಳಲ್ಲಿ ಅಂಗಡಿ ಮಾಲೀಕರು ರಸ್ತೆ ಬದಿ ಎಲ್ಲೆಂದರಲ್ಲಿ ಎಸೆಯುವುದು ಕಂಡು ಬರುತ್ತಿದೆ. ಮನೆಯ ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಸಹ ರಸ್ತೆ ಬದಿಯಲ್ಲಿ ಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಿ ಎಚ್ಚರಿಕೆ ನೀಡಿದ್ದರೂ ಮತ್ತೆ ತ್ಯಾಜ್ಯವನ್ನು ಎಸೆಯಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸುವುದರ ಜತೆಗೆ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲಾಗುವುದು. ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನಗರದ ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿ ನಗರಸಭೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.