ADVERTISEMENT

ಹೊಳೆನರಸೀಪುರ: ನೃತ್ಯದಲ್ಲೂ ಸೈ ಎನಿಕೊಂಡ ವೈದ್ಯರು

ವೈದ್ಯರ ದಿನಾಚರಣೆಯಲ್ಲಿ ಡಾಕ್ಟರ್‌ಗಳ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:57 IST
Last Updated 2 ಆಗಸ್ಟ್ 2025, 5:57 IST
ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ದಂತ ವೈದ್ಯೆ ಅಶ್ವಥಿ ಹಾಗೂ ಸ್ತ್ರೀ ರೋಗ ತಜ್ಞೆ ಭವ್ಯಾ ಭರತನಾಟ್ಯ ಪ್ರದರ್ಶಿಸಿದರು
ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ದಂತ ವೈದ್ಯೆ ಅಶ್ವಥಿ ಹಾಗೂ ಸ್ತ್ರೀ ರೋಗ ತಜ್ಞೆ ಭವ್ಯಾ ಭರತನಾಟ್ಯ ಪ್ರದರ್ಶಿಸಿದರು   

ಹೊಳೆನರಸೀಪುರ: ಸದಾ ರೋಗಿಗಳ ಆರೈಕೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆಯಲ್ಲಿಯೇ ಮಗ್ನರಾಗಿರುವ ವೈದ್ಯರೂ ಇಷ್ಟೊಂದು ಅದ್ಭುತವಾಗಿ ನೃತ್ಯ ಮಾಡುತ್ತಾರಾ? ಹಾಡು ಹೇಳುತ್ತಾರಾ ಎಂದು ಆಸ್ಪತ್ರೆಯ ಶುಶ್ರೂಷಕಿಯರು, ಸಿಬ್ಬಂದಿ ಹಾಗೂ ಆಹ್ವಾನಿತರು ಬೆರಗಾದರು.

ಗುರುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ದಂತ ವೈದ್ಯೆ ಡಾ. ಅಶ್ವಥಿ, ಡಾ. ಭವ್ಯಾ ಅವರು ಭರತನಾಟ್ಯದ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಡಾ. ವಿನಯ್, ಡಾ. ಸತೀಶ್, ರಿಮಿಕ್ಸ್ ಹಾಡುಗಳಿಗೆ ಮಾಡಿದ ನೃತ್ಯ ಸಭಿಕರನ್ನು ಮಂತ್ರಮಗ್ಧರನ್ನಾಗಿಸಿತು.

ನಿಮಗಿಂತ ಹಿರಿಯಳಾಗಿದ್ದರೂ ನಾನೇನೂ ಕಮ್ಮಿ ಇಲ್ಲ ಎನ್ನುವ ಹಾಗೆ ಡಾ. ಪ್ರತಿಭಾ ಅವರು, ಡಾ. ಅಶ್ವಥಿ ಹಾಗೂ ತಂಡದ ಜೊತೆಯಲ್ಲಿ ನೃತ್ಯ ಮಾಡಿ ಸೈ ಎನಿಸಿಕೊಂಡರು. ಡಾ.ಅಜಯ್, ಡಾ. ಸತ್ಯಪ್ರಕಾಶ್, ಡಾ.ಲೋಕೇಶ್, ಡಾ. ದಿನೇಶ್‌ಕುಮಾರ್ ನೃತ್ಯಗಳೂ ಗಮನ ಸೆಳೆದವು. ಡಾ. ಸತ್ಯಪ್ರಕಾಶ್ ಹೆಜ್ಜೆ ಹಾಕುವಾಗ ಸಭಿಕರು ಮೈಕಲ್‌ ಜಾಕ್ಸನ್ ಎಂದು ಕೂಗಿದರು. ಡಾ. ಕುಸುಮಾ, ಡಾ. ಅಶ್ವಥಿಯ ರೋಲ್ ಪ್ಲೇ ರಂಜಿಸಿತು.

ADVERTISEMENT

ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಆರೋಗ್ಯಾಧಿಕಾರಿ ಡಾ. ಧನಶೇಖರ್, ಡಾ.ಬಿ.ಸಿ. ರಾಯ್ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ, ವೈದ್ಯರೆಲ್ಲರಿಗೂ ಸದಾಕಾಲ ಗೌರವ ತಂದು ಕೊಡುತ್ತಿದೆ ಎಂದರು.

ಡಾ. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಕ್ಕೆ ಅತ್ಯುತ್ತಮ ಸೇವೆ ನೀಡಲು ವೈದ್ಯರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ವೈದ್ಯಕೀಯ ಸೇವೆಯಿಂದಲೇ ಭಾರತರತ್ನ ಪಡೆದ ಬಿ.ಸಿ. ರಾಯ್ ವೈದ್ಯರೆಲ್ಲರ ಕಣ್ಣು ಎಂದು ಬಣ್ಣಿಸಿದರು.

ಡಾ.ಲಕ್ಷ್ಮಿಕಾಂತ್ ಹಾಗೂ ಡಾ.ಧನಶೇಖರ್ ಅವರಿಗೆ ಬಿ.ಸಿ. ರಾಯ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನಯ್ ಸ್ವಾಗತಿಸಿ, ಡಾ ಲೋಕೇಶ್ ವಂದಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ಶಸ್ತ್ರ ಚಿಕಿತ್ಸೆ ತಜ್ಞ ಡಾ. ವಿನಯ್ ಕಣ್ಣಿನ ತಜ್ಞ ಡಾ ಸತೀಶ್ ರಿಮಿಕ್ಸ್ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು
ಇಲ್ಲಿನ ಎಲ್ಲ ವೈದ್ಯರು ದಾದಿಯರು ಸಿಬ್ಬಂದಿ ಶಾಸಕ ಎಚ್.ಡಿ. ರೇವಣ್ಣ ಅವರ ಸಹಕಾರದಿಂದ ನಮ್ಮ ಈ ಆಸ್ಪತ್ರೆ ‘ಹೊನಪು’ ರಾಜ್ಯಮಟ್ಟದ ಅತ್ಯುತ್ತಮ ಆಸ್ಪತ್ರೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ
–ಡಾ.ನಾಗೇಂದ್ರ, ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.