ಹಾಸನ: ತಾಲ್ಲೂಕಿನ ಕಟ್ಟಾಯ ಗ್ರಾಮದಲ್ಲಿ ಶ್ವಾನಗಳೆರಡು ಕಾಳಿಂಗ ಸರ್ಪದೊಂದಿಗೆ ಕಾದಾಡಿ, ಮಕ್ಕಳು ಹಾಗೂ ಕೂಲಿ ಕಾರ್ಮಿಕರನ್ನು ಕಾಪಾಡಿದ್ದು, ನೆಚ್ಚಿನ ಶ್ವಾನವೊಂದು ಮೃತಪಟ್ಟಿದೆ.
ಗ್ರಾಮದ ಶಮಂತ್ ಎಂಬುವವರು ತಮ್ಮ ತೋಟದಲ್ಲಿ ಪಿಟ್ ಬುಲ್ ಹಾಗೂ ಡಾಬರ್ ಮನ್ ನಾಯಿಗಳನ್ನು ಸಾಕಿದ್ದಾರೆ. ಬಿಟ್‌ಬುಲ್ ಶ್ವಾನಕ್ಕೆ ಪ್ರೀತಿಯಿಂದ ಮಾಲೀಕ ಭೀಮ ಎಂದು ಹೆಸರಿಟ್ಟಿದ್ದರು.
ಮಂಗಳವಾರ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, 12 ಅಡಿ ಉದ್ದದ ಬಿಳಿ ಬಣ್ಣದ ಕಾಳಿಂಗ ಸರ್ಪ ಮನೆ ಬಳಿ ಕಾಣಿಸಿಕೊಂಡಿದೆ. ಆಟವಾಡುತ್ತಿದ್ದ ಮಕ್ಕಳ ಬಳಿಗೆ ಬಂದ ಸರ್ಪ, ನಂತರ ತೆಂಗಿನ ಗರಿಯ ಕೆಳಗೆ ಅವಿತು ಕುಳಿತಿತ್ತು.
ಇದನ್ನು ಗಮನಿಸಿದ ಶ್ವಾನಗಳು ಏಕಾಏಕಿ ಕಾಳಿಂಗ ಸರ್ಪದ ಮೇಲೆ ಎರಗಿವೆ. ಮಾಲೀಕ ಕರೆದರೂ ಬಾರದೇ ಸುಮಾರು 15 ನಿಮಿಷಗಳಿಗೂ ಹೆಚ್ಚು ಹಾವಿನ ಜೊತೆಗೆ ಸೆಣಸಾಡಿವೆ. ಈ ವೇಳೆ ಪಿಟ್ ಬುಲ್ ನಾಯಿಯ ಮುಖಕ್ಕೆ ಹಾವು ಕಚ್ಚಿದೆ. ಆದರೂ ಹಟ ಬಿಡದ ಶ್ವಾನ ನಿರಂತರವಾಗಿ ಹಾವಿನೊಂದಿಗೆ ಸೆಣಸಾಡಿ 12 ಉದ್ದದ ಸರ್ಪವನ್ನು 10 ತುಂಡುಗಳಾಗಿ ಮಾಡಿ ಸಾಯಿಸಿವೆ.
ಆದರೆ ವಿಷವೇರಿ ಬಿಟ್ ಬುಲ್ ಶ್ವಾನ ಪ್ರಾಣಬಿಟ್ಟಿದೆ. ಒಂದು ವೇಳೆ ಶ್ವಾನಗಳು ಬಾರದಿದ್ದರೆ, ಕೂಲಿ ಕಾರ್ಮಿಕರು ಅಥವಾ ಮಕ್ಕಳ ಮೇಲೆ ಕಾಳಿಂಗ ಸರ್ಪ ದಾಳಿ ಮಾಡುತಿತ್ತು. ಶ್ವಾನಗಳ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದುರಂತವೊಂದು ತಪ್ಪಿದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪಿಟ್ ಬುಲ್ ಹಲವಾರು ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಬಹುಮಾನಗಳನ್ನೂ ಪಡೆದಿತ್ತು. ಮನೆಯ ಮಗನಂತ್ತಿದ್ದ ಶ್ವಾನವನ್ನು ಕಳೆದುಕೊಂಡ ಶಮಂತ್ ಅವರ ಕುಟುಂಬ ಹಾಗೂ ಕೂಲಿ ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ. ಮತ್ತೊಮ್ಮೆ ಹುಟ್ಟಿ ಬಾ ಎಂದು ಸಮಾಧಿ ಬಳಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜೊತೆಗಾರನನ್ನು ಕಳೆದುಕೊಂಡ ಡಾಬರ ಮನ್ ನಾಯಿಯ ಮೂಕರೋದನೆಯೂ ಕರಳು ಹಿಂಡುತ್ತಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.