ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಬಳಿ ತುಂಬಿ ಹರಿಯುತ್ತಿರುವ ಬೆಣಗಿನ ಹಳ್ಳ
ಸಕಲೇಶಪುರ: ‘ಭಾರೀ ಮಳೆಯಿಂದ ನಮ್ಮೂರಿನ ಸೇತುವೆ ತುಂಡಾಗಿ 7 ವರ್ಷವಾದರೂ ಪುನರ್ ನಿರ್ಮಾಣ ಮಾಡಿಲ್ಲ. ಗದ್ದೆ ತೋಟ, ಗ್ರಾಮ ಪಂಚಾಯಿತಿ ಕಚೇರಿ, ಸೊಸೈಟಿಗೆ ಈಗ ಹೆಚ್ಚುವರಿ 8 ಕಿ.ಮೀ. ಸುತ್ತಿಕೊಂಡು ಹೋಗಿ ಬರಬೇಕು. ನಮ್ಮ ಗೋಳು ಕೇಳೋರು ಇಲ್ಲ, ಬಗೆಹರಿಸೋರು ಇಲ್ಲ...’
ತಾಲ್ಲೂಕಿನ ದೋನಹಳ್ಳಿ ಗ್ರಾಮಸ್ಥರ ನೋವಿನ ಮಾತುಗಳಿವು. ಹಾನುಬಾಳು ಹೋಬಳಿ ವ್ಯಾಪ್ತಿಯ ಗ್ರಾಮದ ಮೂಲಕ ಹೇಮಾವತಿಯ ಉಪ ನದಿ ಬೆಣಗಿನ ಹಳ್ಳಕ್ಕೆ ಕಟ್ಟಲಾಗಿದ್ದ ಸೇತುವೆ 2018 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಇದರಿಂದ ಅವರೇಕಾಡು, ಬಾಚನಹಳ್ಳಿ ಎಸ್ಟೇಟ್, ದೋನಹಳ್ಳಿ, ಮಗಜಹಳ್ಳಿ ಕಡೆಯಿಂದ ದೇವಾಲದಕೆರೆ ಕಡೆಗೆ ಹಾಗೂ ಮಗಜಹಳ್ಳಿ, ದೇವಾಲದಕೆರೆ ಕಡೆಯಿಂದ ದೋನಹಳ್ಳಿ ಕಡೆಗೆ ಸಂಪರ್ಕವೇ ಕಡಿತಗೊಂಡಿದೆ.
‘ಹಳ್ಳದ ಆ ಕಡೆ ಇರುವವರ ಜಮೀನುಗಳು ಈ ಕಡೆಗೂ, ಈ ಕಡೆಯವರ ಜಮೀನು ಹಳ್ಳದ ಆಚೆ ಕಡೆಗೂ ಇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.
‘₹23ಸಾವಿರ ಕೋಟಿ ಖರ್ಚು ಮಾಡಿ, ನಮ್ಮ ಹಳ್ಳಗಳ ನೀರನ್ನು ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಬಯಲು ಸೀಮೆಗೆ ಹರಿಸಲಾಗುತ್ತಿದೆ. ಆದರೆ ನಮ್ಮ ಮನವಿಗೆ ಸ್ಪಂದಿಸುವವರೇ ಇಲ್ಲ. ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹತ್ತಾರು ಗ್ರಾಮಗಳ ಜನರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ’ ಎಂದು ಗ್ರಾಮದ ಡಿ.ಬಿ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
‘ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆಗ ಕಾಲ್ನಡಿಗೆಯಲ್ಲಿ ಸಂಚರಿಸುತ್ತೇವೆ. ಮಳೆಗಾಲದಲ್ಲಂತೂ ಸಮೀಪ ಹೋಗಲೂ ಆಗದಷ್ಟು ವೇಗವಾಗಿ ಹಳ್ಳದ ನೀರು ಹರಿಯುತ್ತದೆ’ ಎಂದು ಗಿರೀಶ್ ಹೇಳಿದರು.
‘ದೇವಲಕೆರೆ ಗ್ರಾಮ ಪಂಚಾಯಿತಿ ಕಚೇರಿ, ನ್ಯಾಯಬೆಲೆ ಅಂಗಡಿ, ಬ್ಯಾಂಕ್‌ಗೆ ಹೋಗಬೇಕಾದರೆ, ಬಾಚನಹಳ್ಳಿ ಎಸ್ಟೇಟ್, ಅವರೇಕಾಡು, ಹಾನುಬಾಳು ಸುತ್ತಬೇಕು. ವಾಹನವಿಲ್ಲದವರಿಗೆ ಕಾಲ್ನಡಿಗೆಯೇ ಗಟ್ಟಿ. ಬಾಡಿಗೆ ವಾಹನಗಳಿದ್ದರೂ ದುಬಾರಿ ಹಣ ಕೊಡಬೇಕು. ಸೇತುವೆ ನಿರ್ಮಾಣ ಮರೀಚಿಕೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಎಚ್.ಕೆ. ಕುಮಾರಸ್ವಾಮಿ ಶಾಸಕರಾಗಿದ್ದಾಗ, ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಈಗಿನ ಶಾಸಕರೂ 3 ಬಾರಿ ಭೇಟಿ ನೀಡಿದ್ದಾರೆ. ಸಿಎಂಗೆ ಮನವಿ ಮಾಡಿದರೂ ಅನುದಾನ ಬಂದಿಲ್ಲಡಿ.ಎಸ್. ಲೋಕೇಶ್,ದೋನಹಳ್ಳಿ ಗ್ರಾಮಸ್ಥ
‘ಹೊಸ ಸೇತುವೆ ನಿರ್ಮಿಸಲು ಕೋರಿ ಸರ್ಕಾರಕ್ಕೆ ಮೂರು ಬಾರಿ ಮನವಿ ಸಲ್ಲಿಸಿದ್ದೇನೆ. ಎತ್ತಿನಹೊಳೆ ಯೋಜನೆಯಡಿ ಇದೂ ಸೇರಿ ಕೆಲವು ಸೇತುವೆ ರಸ್ತೆ, ತಡೆಗೋಡೆಗಳ ನಿರ್ಮಾಣಕ್ಕೆ ₹ 100 ಕೋಟಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಶಾಸಕ ಸಿಮೆಂಟ್ ಮಂಜು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.