ADVERTISEMENT

ರಕ್ತದಾನ ಮಾಡಿ: ದೇಹದ ಒತ್ತಡ ಸುಧಾರಿಸಿ: ಡಾ. ಸುದರ್ಶನ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:02 IST
Last Updated 3 ಆಗಸ್ಟ್ 2025, 2:02 IST
ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು
ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು   

ಕೊಣನೂರು: ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸೇವಾ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದರ್ಶನ್ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಅರಕಲಗೂಡು. ಸಮುದಾಯ ಆರೋಗ್ಯ ಕೇಂದ್ರ ಕೊಣನೂರು, ಗ್ರಾಮ ಪಂಚಾಯತಿ, ಕೊಣನೂರು, ಹಿಮ್ಸ್ ಬೋಧಕ ಆಸ್ಪತ್ರೆ ರಕ್ತ ನಿಧಿ, ಲಯನ್ಸ್ ಸಂಸ್ಥೆ ಕೊಣನೂರು ಹಾಗೂ ಅರಕಲಗೂಡು ರೋಟರಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ನೆರವಾಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಹಾಗೂ ದೇಹದ ಒತ್ತಡ ಸುಧಾರಿಸಿ, ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದಲ್ಲದೇ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ADVERTISEMENT

ಆಡಳಿತ ವೈದ್ಯಾಧಿಕಾರಿ ಡಾ. ಸುನಿಲ್ ಮಾತನಾಡಿ, ರಕ್ತವನ್ನು ದಾನ ಮಾಡುವುದರಿಂದ ಉಚಿತ ಆರೋಗ್ಯ ತಪಾಸಣೆಯಾಗುತ್ತದೆ, ದಾನಿಯ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಹೃದಯಾಘಾತವನ್ನು ಶೇ 80 ರಷ್ಟು ತಡೆಯುತ್ತದೆ, ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಅಪಾಯ, ಕಾಯಿಲೆಗಳು ಕಡಿಮೆಯಾಗುತ್ತದೆ, ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ, ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಹಾಗೂ ಮಾನಸಿಕ ತೃಪ್ತಿ ಸಿಗುತ್ತದೆ ಎಂದರು.

ಗ್ರಾ.ಪಂ ಅಧ್ಯಕ್ಷ ಬಿ. ನಾಗರಾಜ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎ. ಶ್ರೀಧರ್, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರದೀಪ್, ರಕ್ಷಾ ಸಮಿತಿ ಅಧ್ಯಕ್ಷ ಕೆ.ವಿ. ಶ್ರೀನಿವಾಸಮೂರ್ತಿ ಮಾತನಾಡಿದರು.

ಶಿಬಿರದಲ್ಲಿ 30 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ತಜ್ಞ ವೈದ್ಯೆ ಡಾ. ರಶ್ಮಿ, ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ, ಸಿಬ್ಬಂದಿ, ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ದೀಪ್ತಿ ಹಾಗೂ ಸಿಬ್ಬಂದಿ ವರ್ಗದವರು, ಗ್ರಾ.ಪಂ ಸದಸ್ಯರು, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.