ಹಾಸನ: ರಕ್ತದಾನ ಮಹಾದಾನ. ರಕ್ತದಾನವು ಜೀವದಾನ ಮಾಡಿದ ಹಾಗೆ. ಒಬ್ಬರು ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಬಹುದು ಎಂದು ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ನಿರ್ದೇಶಕಿ ಡಾ. ಹೇಮಲತಾ ಪಟ್ಟಾಭಿ ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿನ ಹಾಸನಾಂಬ ದಂತ ವೈದ್ಯಕೀಯ ಕಾಲೇಜು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಹಾಸನ ಶಾಖೆಯ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಸ್ಟ್ರೀಯಾ ದೇಶದ ಅಮೆರಿಕನ್ ವಿಜ್ಞಾನಿ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನದ ಅಂಗವಾಗಿ ವಿಶ್ವದ ಎಲ್ಲೆಡೆ 2005 ರಿಂದ ರಕ್ತದಾನ ಮಾಡುವ ಮೂಲಕ ಆಚರಣೆ ಮಾಡಲಾಗುತ್ತಿದೆ. ಇವರು 1901ರಲ್ಲಿ ಎ, ಬಿ, ಒ ರಕ್ತ ಗುಂಪುಗಳನ್ನು ಕಂಡು ಹಿಡಿದಿದ್ದು, ಇದರಿಂದಾಗಿ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ನೀಡುವ ಸಂದರ್ಭದಲ್ಲಿ ಹೆಚ್ಚು ಅನುಕೂಲ ಆಗಿದೆ’ ಎಂದರು.
ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕಿ ಡಾ.ರಂಗಲಕ್ಷ್ಮಿ ಆರ್.ಎನ್. ಮಾತನಾಡಿ, ‘ನೆಗೆಟಿವ್ ರಕ್ತ ಗುಂಪು ಹೊಂದಿರುವ ವ್ಯಕ್ತಿಗಳು ಅಥವಾ ದಾನಿಗಳು ತಮ್ಮ ಹೆಸರುಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಶಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು, ತುರ್ತು ಸಂದರ್ಭದಲ್ಲಿ ರಕ್ತ ದಾನ ಮಾಡಿ ಸಮಾಜ ಸೇವೆ ಮಾಡಬೇಕು’ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಸಹದೇವ್ ಸಿ.ಕೆ. ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರು ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ವಿವಿಧ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಮಾಡುತ್ತಿರುವ ಶ್ಲಾಘನೀಯ ಎಂದರು.
ಪ್ರಾಂಶುಪಾಲ ಡಾ.ಸಹದೇವ್ ಅವರನ್ನು ರೆಡ್ ಕ್ರಾಸ್ ವತಿಯಿಂದ ಸನ್ಮಾನಿಸಲಾಯಿತು. ಹಿತಾರಾಜ್ ನಿರೂಪಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ.ಮಂಜುನಾಥ್, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್, ಉಪ ಸಭಾಪತಿ ಡಾ.ವೈ.ಎಸ್ ವೀರಭದ್ರಪ್ಪ, ನಿರ್ದೇಶಕರಾದ ಸುಬ್ಬಸ್ವಾಮಿ, ಶಬ್ಬೀರ್ ಅಹಮದ್, ಜಯೇಂದ್ರಕುಮಾರ್, ಗಿರೀಶ್, ಭೀಮರಾಜ್, ಅವಿನಾಶ್, ಡಾ.ರಮ್ಯಾ ಮಧುಸೂದನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.