ಸಕಲೇಶಪುರ: ಯುವ ಸಮುದಾಯ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯ. ಸಮಾಜದ ಎಲ್ಲ ಧರ್ಮಗುರುಗಳು ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ನಶೆ ಮುಕ್ತ ಸಮಾಜ ನಿರ್ಮಾಣದ ಹೋರಾಟಗಾರ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿದರು.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರ ಜನ್ಮದಿನದ ಅಂಗವಾಗಿ ಗುರುವಾರ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಭಾರತ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮಾದಕ ವಸ್ತುಗಳ ವ್ಯಸನದಿಂದ ಸಮಾಜ ಮುಕ್ತಗೊಳಿಸಲು ನಿರಂತರ ಹೋರಾಟದ ಅವಶ್ಯಕತೆ ಇದೆ. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ನೇತೃತ್ವದಲ್ಲಿ ಇಂತಹ ಆಂದೋಲನ ಹಮ್ಮಿಕೊಂಡಿರುವುದು ಒಳ್ಳೆಯ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮದ್ಯ ಮಾರಾಟದಿಂದ ಬರುವ ಹಣ ಪಾಪದ ಹಣ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಪಾನ ನಿಷೇಧ ಮಾಡಿದರೆ, ನಾನು ಅವರಿಗೆ ಸಾವಿರ ಸಲಾಂ ಹೊಡೆಯುತ್ತೇನೆ ಎಂದ ಬಿ.ಆರ್.ಪಾಟೀಲ, ಈ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದೆ. ಆದರೆ ಅವರು ನಕ್ಕು ಸುಮ್ಮನಾದರು’ ಎಂದು ತಿಳಿಸಿದರು.
‘ನಾನು ಈ ವಿಷಯವನ್ನು ಮುಖ್ಯಮಂತ್ರಿ ಜೊತೆಯೂ ಚರ್ಚಿಸಿದ್ದೇನೆ. ಪಾನ ನಿಷೇಧವು ಕೇವಲ ಒಂದು ರಾಜ್ಯದಲ್ಲಿ ಆಗದು. ಇಡೀ ದೇಶದಲ್ಲಿ ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದರು.
ಕೇವಲ ಈ ತಾಲ್ಲೂಕಿನಲ್ಲಿ ಮಾತ್ರ ಹೋರಾಟ ಮಾಡಿದರೆ ಸಾಲದು. ಪಕ್ಕದ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯದ ಗಡಿ ಭಾಗದಿಂದಲೂ ಮಾದಕ ವಸ್ತುಗಳು ಬರುತ್ತಿರುವುದು ಆತಂಕಕಾರಿ. ಎಲ್ಲೆಡೆ ಇಂತಹ ನಶೆ ಮುಕ್ತ ಆಂದೋಲನ ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರ ಮನೆಗಳನ್ನು ನಶೆ ಮುಕ್ತಗೊಳಿಸಬೇಕು. ನಿರಂತರ ಹೋರಾಟ ಮತ್ತು ಮಾಹಿತಿ ಆಂದೋಲನಗಳ ಮೂಲಕ ಯುವ ಸಮುದಾಯವನ್ನು ಜಾಗೃತಿಗೊಳಿಸುವುದರಿಂದ ಡ್ರಗ್ಸ್ ಮುಕ್ತ ಸಮಾಜ ಮತ್ತು ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದು ಎಂದರು.
ಉದ್ಘಾಟಿಸಿ ಮಾತನಾಡಿದ ಗಾಂಧಿವಾದಿ ಪ್ರಸನ್ನ ಗಾಂಧಿ, ‘ಸಮಾಜದಲ್ಲಿ ಅನಾದಿ ಕಾಲದಿಂದಲೂ ನಶೆ ಹಾಗೂ ಮಾದಕ ವಸ್ತು ಸೇವನೆ ಮಾನವನ ಜೊತೆಗಿದೆ. ಹಿಂದಿನಿಂದಲೂ ಎಲ್ಲ ಧರ್ಮಗಳು ಸಭ್ಯತೆಯನ್ನು ಬೋಧಿಸಿವೆ. ಇಂದು ಎಲ್ಲ ಧರ್ಮ ಬೋಧನೆ, ಸಭ್ಯತೆ, ದೇವರನ್ನು ಪಕ್ಕಕ್ಕೆ ಸರಿಸಿ, ಮಾದಕತೆ ಪೀಠ ಅಲಂಕರಿಸಿದೆ. ಮಾದಕ ವಸ್ತು ಸೇವನೆ ರಾಕ್ಷಸ ರೂಪ ತಾಳಿದೆ. ಹಿಂಸೆ, ಕ್ರೌರ್ಯ ತಾಳಿದೆ. ಮನೆಯಲ್ಲಿ ಮಗುವಿಗೆ ಸಭ್ಯತೆ, ಪ್ರೀತಿ, ವಿಶ್ವಾಸ, ಸಹಬಾಳ್ವೆಯಲ್ಲಿ ಕಲಿಸಬೇಕಾಗಿದೆ’ ಎಂದರು.
ನಶೆ ಮುಕ್ತ ಆಂದೋಲನದ ಹೋರಾಟಗಾರ ಮಹಾರಾಷ್ಟ್ರದ ಅವಿನಾಶ್ ಕಾಕಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಮಲ್ನಾಡ್ ಮಹಬೂಬ್. ಜೈಭೀಮ್ ಮಂಜು, ಸಾಗರ್ ಜಾನೇಕೆರೆ, ಡಾ.ನವೀನ್ ಚಂದ್ರಶೆಟ್ಟಿ, ಶಾರದಾ ಗುರುಮೂರ್ತಿ, ಅಕ್ಬರ್ ಜುನೈದ್ ಇತರರು ಇದ್ದರು.
ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು. 2024ನೆೇ ಸಾಲಿನಲ್ಲಿ ಒಟ್ಟು 24 2025 ರಲ್ಲಿ ಇದುವರೆಗೆ 11 ಪ್ರಕರಣಗಳು ದಾಖಲಾಗಿವೆ.ಪ್ರಮೋದ್ ಕುಮಾರ್ ಜೈನ್ ಡಿವೈಎಸ್‌ಪಿ
l ಡ್ರಗ್ಸ್ ಮಾರಾಟಗಾರರಿಗೆ ಜೀವಾವಧಿ ಶಿಕ್ಷೆ, ಆಸ್ತಿಯ ಜಪ್ತಿ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಿ
l ಪ್ರತಿಯೊಂದು ಶಾಲೆ ಮತ್ತು ಕಾಲೇಜಿನಲ್ಲಿ ಡ್ರಗ್ಸ್ ವಿರುದ್ಧ ವಾರ್ಷಿಕ ಜಾಗೃತಿ ಪಠ್ಯಕ್ರಮ ಕಡ್ಡಾಯ
l ಜಿಲ್ಲೆಗೊಂದು ಸರ್ಕಾರಿ ಪುನರ್ವಸತಿ ಕೇಂದ್ರ: ಹೊರಬಂದವರಿಗೆ ತರಬೇತಿ, ನೆರವು ನೀಡಿ
l ಪ್ರತಿ ತಾಲ್ಲೂಕಿನಲ್ಲಿ ಯುವಕ, ಯುವತಿ ಕ್ಲಬ್ ಸ್ಥಾಪಿಸಿ: ಸೇವಾ ಚಟುವಟಿಕೆಗಳಿಗೆ ಅವಕಾಶ
l ಸಮುದಾಯ ಆಧರಿತ ನಿಗಾ ವ್ಯವಸ್ಥೆ, ಪ್ರತಿ ವಾರ್ಡ್, ಗ್ರಾಮದಲ್ಲಿ ಡ್ರಗ್ ವಿರುದ್ಧ ಕಾರ್ಯಪಡೆ ರಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.