
ಹಾಸನ: ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗೆ ಸಹಕಾರ ಶಿಕ್ಷಣ ತರಬೇತಿ ಅವಶ್ಯ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಆಶ್ರಯದಲ್ಲಿ ಮೈಸೂರು ವಿಭಾಗದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ಕ್ಷೇತ್ರವು ಇಂದು ತನ್ನದೇ ಆದ ಛಾಪು ಮೂಡಿಸಿ, ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ. ಉತ್ತಮ ಸಾಧನೆ ಮಾಡುತ್ತಿರುವುದರಿಂದ ಸಹಕಾರ ಸಂಘಗಳು, ಅದರಲ್ಲೂ ಪತ್ತಿನ ಸಹಕಾರ ಸಂಘಗಳ ಏಳಿಗೆಗೆ ದುಡಿಯುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ದಿನ ನಿತ್ಯದ ವ್ಯವಹಾರಗಳ ಕುರಿತಂತೆ ಅರಿಯುವುದು ಅಗತ್ಯ. ಹಾಗಾಗಿ ತರಬೇತಿಗಳಲ್ಲಿ ಭಾಗವಹಿಸಿ ಬದಲಾವಣೆಗಳ ಕುರಿತಂತೆ ತಿಳಿದು, ಅದನ್ನು ಸಂಘಗಳ ಅಭಿವೃದ್ಧಿಗೆ ಪೂರಕವಾಗುವಂತೆ ಬಳಕೆ ಮಾಡಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್. ಪ್ರಕಾಶ್ ಮಾತನಾಡಿ, ‘ಇಂದು ಸಹಕಾರ ಕ್ಷೇತ್ರದಲ್ಲಿ ಪತ್ತಿನ ಸಹಕಾರ ಸಂಘಗಳ ಪಾತ್ರ ದೊಡ್ಡದು. ನಿತ್ಯ ಸದಸ್ಯರೊಂದಿಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಅಲ್ಲಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣ. ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರು ನೀಡುವ ಮಾಹಿತಿಯ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಟಿ. ದ್ಯಾವೇಗೌಡ ಮಾತನಾಡಿ, ‘ರಾಜ್ಯ ಸಹಕಾರ ಮಹಾಮಂಡಳದಿಂದ ಹೈಟೆಕ್ ಮಾದರಿ ತರಬೇತಿ ಹಮ್ಮಿಕೊಳ್ಳುತ್ತಿದ್ದು, ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುತ್ತಿರುವುದು ಸಂತೋಷದ ಸಂಗತಿ, ಶಿಬಿರಾರ್ಥಿಗಳು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಮಹಾಮಂಡಳದ ಉದ್ದೇಶ ಈಡೇರಿದಂತಾಗಿದೆ’ ಎಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಡಿ.ಪಿ. ಸೋಮೇಗೌಡ, ನಿರ್ದೇಶಕರಾದ ವಿ.ಎನ್. ರಾಜಣ್ಣ, ಪುಟ್ಟಸ್ವಾಮಿಗೌಡ, ನಾಗರಾಜು, ಪದ್ಮರಾಜ್, ಪ್ರವೀಣ್, ಸಿದ್ದೇಶ್, ಸೋಮಣ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಮನ್ವಯಾಧಿಕಾರಿ ಮಲ್ಲಯ್ಯಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.