ಹಾಸನ: ಇಲ್ಲಿನ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಏ.16ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯ ಹೇಮಲತಾ ಕಮಲ್‌ಕುಮಾರ್ ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಆಗಸ್ಟ್‌ನಲ್ಲಿ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮೈತ್ರಿಯನ್ನು ಬದಿಗಿಟ್ಟು ಜೆಡಿಎಸ್ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿತ್ತು. ಉಪಾಧ್ಯಕ್ಷರನ್ನಾಗಿ ಜೆಡಿಎಸ್ ಬೆಂಬಲಿಸುತ್ತಿರುವ ಬಿಜೆಪಿ ಸದಸ್ಯೆ ಲತಾದೇವಿ ಅವರನ್ನು ಆಯ್ಕೆ ಮಾಡಲಾಗಿತ್ತು. ಒಪ್ಪಂದದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಲತಾದೇವಿ ರಾಜೀನಾಮೆ ಸಲ್ಲಿಸಿದ್ದು, ಹೊಸ ಉಪಾಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ.
ಇದೇ ಒಪ್ಪಂದದ ಪ್ರಕಾರ ಹಾಲಿ ಅಧ್ಯಕ್ಷ ಎಂ.ಚಂದ್ರೇಗೌಡ ಕೂಡ ರಾಜೀನಾಮೆ ನೀಡಬೇಕಿತ್ತು. ಆದರೆ, ‘ಕೇವಲ 6 ತಿಂಗಳಾಗಿದ್ದು, ಯಾವುದೇ ಕೆಲಸ ಮಾಡಲು ಆಗಿಲ್ಲ’ ಎನ್ನುವ ವಾದ ಮುಂದಿಟ್ಟಿರುವ ಚಂದ್ರೇಗೌಡ, ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ. ಪಟ್ಟು ಸಡಿಲಿಸದ ಜೆಡಿಎಸ್ ನಾಯಕರು, ಚಂದ್ರೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.
ಆದರೆ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಉಪಾಧ್ಯಕ್ಷರ ಸ್ಥಾನ ಭರ್ತಿಯಾಗಬೇಕು. ಅದಕ್ಕಾಗಿ ಇದೀಗ ಚುನಾವಣೆ ನಡೆಸಲಾಗುತ್ತಿದ್ದು, ಜೆಡಿಎಸ್ ನಾಯಕರು, ಬಿಜೆಪಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಹೇಮಲತಾ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಉಭಯ ಪಕ್ಷಗಳ ಸದಸ್ಯರು ಅವರನ್ನು ಬೆಂಬಲಿಸಲಿದ್ದಾರೆ.
ಬಿಜೆಪಿಗೆ ಗಾಳ: ನಗರಸಭೆಯ ಒಟ್ಟು ಸದಸ್ಯ ಬಲ 35 ಇದ್ದು, ಶಾಸಕ ಸ್ವರೂಪ್ ಮತ ಸೇರಿ ಒಟ್ಟು 36 ಮತಗಳಿವೆ. ಆಗಸ್ಟ್‌ನಲ್ಲಿ ನಡೆದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ವೇಳೆ ಹಾಲಿ ಅಧ್ಯಕ್ಷ ಎಂ.ಚಂದ್ರೇಗೌಡ 34 ಮತಗಳನ್ನು ಪಡೆದಿದ್ದರು. ಬಹುತೇಕ ಬಿಜೆಪಿ ಸದಸ್ಯರು ಚಂದ್ರೇಗೌಡರಿಗೆ ಮತ ಹಾಕಿದ್ದು ಬಹಿರಂಗವಾಗಿತ್ತು.
ಬಿಜೆಪಿ ಸದಸ್ಯರ ಬೆಂಬಲ ಇರುವುದರಿಂದಲೇ ರಾಜೀನಾಮೆ ನೀಡದಿರಲು ಚಂದ್ರೇಗೌಡರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಈ ಮಧ್ಯೆ ಬಿಜೆಪಿ ಸದಸ್ಯರು ಚಂದ್ರೇಗೌಡರಿಗೆ ಬೆಂಬಲ ನೀಡದಂತೆ ಮಾಡಲು ಮುಂದಾಗಿರುವ ಜೆಡಿಎಸ್ ನಾಯಕರು, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ. ಆ ಮೂಲಕ ಅವಿಶ್ವಾಸ ನಿರ್ಣಯದ ಪರವಾಗಿ ಬಿಜೆಪಿ ಸದಸ್ಯರೂ ಮತ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.