ADVERTISEMENT

ಬೇಲೂರು | ಕಾಡಾನೆ ಸಮಸ್ಯೆ: ವರ್ಷದೊಳಗೆ ಪರಿಹಾರ; ಜಿಲ್ಲಾಧಿಕಾರಿ ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:02 IST
Last Updated 30 ಸೆಪ್ಟೆಂಬರ್ 2025, 2:02 IST
<div class="paragraphs"><p>ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಆನೆ, ಮಾನವ ಸಂಘರ್ಷ ಆತ್ಮವಿಶ್ವಾಸ ಕಾರ್ಯಾಗಾರ ಮತ್ತು ಜನಸ್ಪಂದನ ಸಭೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟಿಸಿದರು. </p></div>

ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಆನೆ, ಮಾನವ ಸಂಘರ್ಷ ಆತ್ಮವಿಶ್ವಾಸ ಕಾರ್ಯಾಗಾರ ಮತ್ತು ಜನಸ್ಪಂದನ ಸಭೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟಿಸಿದರು.

   

ಬೇಲೂರು: ಕಾಡಾನೆ ಸಮಸ್ಯೆಗೆ ಒಂದು ವರ್ಷದೊಳಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದರು.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಕಾಡಾನೆ ಮತ್ತು ಮಾನವ ಸಂಘರ್ಷ ನಿಯಂತ್ರಣ ಕುರಿತು ಅರೇಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಆತ್ಮ ವಿಶ್ವಾಸ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ  ಅವರು ಮಾತನಾಡಿದರು.

ADVERTISEMENT

ಬೇಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆ ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ನಾನು ಈಗಾಗಲೇ ಕಚೇರಿಯಲ್ಲಿ ನಾಲ್ಕು ಸಭೆ ನಡೆಸಿದ್ದು, ಜನರಿಂದ ಸಮಸ್ಯೆಗಳನ್ನು ನೇರವಾಗಿ ಹಾಗೂ ಅಳವಾಗಿ ತಿಳಿಯಬೇಕೆಂದು ಇಲ್ಲಿಗೆ ಬಂದಿದ್ದೇನೆ. ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಿಂಗಳಲ್ಲಿ ಎರಡು ಗುರುವಾರ ಈ ಬಗ್ಗೆ ಕಚೇರಿಯಲ್ಲಿ ಸಭೆ ನಡೆಸುತ್ತೇನೆ ಎಂದರು.

ಅಧಿಕಾರಿಗಳು ಗಾಜಿನ ಮನೆಯಲ್ಲಿದ್ದು, ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಆದ್ದರಿಂದ ಅಧಿಕಾರಿಗಳು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಡ್ರೋಣ್ ಬಳಸಿ, ಅದರಿಂದ ಶಬ್ದ ಹೊರಡಿಸಿ ಆನೆಗಳನ್ನು ಓಡಿಸಲಾಗುವುದು. ಸೆಸ್ಕ್‌ನವರು ಸಮರ್ಪಕವಾದ ವಿದ್ಯುತ್ ಪೂರೈಸಬೇಕು. ಮೊಬೈಲ್ ನೆಟ್ ವರ್ಕ್‌ ಎಲ್ಲ ಪ್ರದೇಶಗಳಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜನರು ಹೇಳಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಅವುಗಳನ್ನು ನಿವಾರಿಸಲು ಮುಂದಾಗುತ್ತೇನೆ. ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಸೌಹಾರ್ದ, ತಾಳ್ಮೆಯಿಂದ ಇದ್ದರೆ ಉತ್ತಮ ಆಡಳಿತ ದೊರೆಯುತ್ತದೆ ಎಂದರು.

ಕಾಡಾನೆ ಸಮಸ್ಯೆಯ ಬಗ್ಗೆ ಕಾಫಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರೀಫ್‌, ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥಶೆಟ್ಟಿ, ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ರೇಣುಕಾನಂದ, ಚೀಕನಹಳ್ಳಿ ಹರೀಶ್, ಕೋಗಿಲಮನೆ ಕುಮಾರ್, ಅಶೋಕ್ ಅರಸು, ಕಮಲಾ ಚನ್ನಪ್ಪ, ಸೋಮಯ್ಯ, ಕೋಕಿಲ, ಚಂದ್ರಶೇಖರ್ ಸೇರಿದಂತೆ ಸಾಕಷ್ಟು ಕೃಷಿಕರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ಡಿಸಿಎಫ್‌ ಸೌರಭ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಉಪ ವಿಭಾಗಾಧಿಕಾರಿ ರಾಜೇಶ್, ಡಿಎಚ್ಒ ಡಾ.ಅನಿಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿಕರು ಪಾಲ್ಗೊಂಡಿದ್ದರು.

ಅರಣ್ಯ ಸಚಿವರು ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದು ಭದ್ರಾ ಅರಣ್ಯದಲ್ಲಿ ಆನೆಧಾಮ ನಿರ್ಮಿಸಿ ಆನೆ ಸ್ಥಳಾಂತರ ಮಾಡಲಾಗುವುದು. ಡ್ರೋನ್ ಬಳಸಿಕೊಂಡು ಕಾಡಾನೆಗಳ ಮೇಲೆ ನಿಗಾ ಇಡಲಾಗುತ್ತಿದೆ.
ಏಡುಕೊಂಡಲ ಸಿಸಿಎಫ್
ತಾಲ್ಲೂಕಿನ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಓಡಿಸಿ. ಇಲ್ಲವಾದಲ್ಲಿ ಅರೇಹಳ್ಳಿ ಬಿಕ್ಕೋಡು ಹೋಬಳಿಯ ಜಮೀನುಗಳನ್ನು ಖರೀದಿ ಮಾಡಿಕೊಳ್ಳಿ. ನಾವೇ ಬೇರೆಡೆಗೆ ಹೋಗುತ್ತೇವೆ.
ಭೋಗ ಮಲ್ಲೇಶ್ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಬದುಕಿನ ಭಾಗ್ಯ ಕೊಡಿ

'ನಮಗೆ ಗ್ಯಾರಂಟಿ ಭಾಗ್ಯಗಳು ಬೇಕಿಲ್ಲ. ಬದುಕಿನ ಭಾಗ್ಯ ಕೊಡಿ" ಎಂದು ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್ ಒತ್ತಾಯಿಸಿದರು. ಆನೆ ದಾಳಿಯಿಂದ ಮೃತರಾದವರ ಕುಟುಂಬಕ್ಕೆ ನೀಡುವ ₹20 ಲಕ್ಷದಿಂದ ಅವರ ಕುಟುಂಬಕ್ಕೆ ಆಸರೆ ಸಿಗುವುದಿಲ್ಲ. ಸಿಸಿಎಫ್‌ ಆನೆ ಸಮಸ್ಯೆಗೆ ಉತ್ತಮ ವರದಿ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಮಾಡಲು ಅರಣ್ಯ ಸಚಿವರು ಒಪ್ಪುತ್ತಿಲ್ಲ. ಜಿಲ್ಲಾಧಿಕಾರಿ ಜನರಿಂದ ಆನೆ ಸಮಸ್ಯೆ ಬಗ್ಗೆ ಕೇಳಿ ಪಡೆದಿರುವ ಅಹವಾಲನ್ನು ಸರ್ಕಾರಕ್ಕೆ ತಿಳಿಸಿ ಅದಷ್ಟು ಬೇಗ ಶಾಶ್ವತ ಪರಿಹಾರ ಕೊಡಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.