ADVERTISEMENT

ಹಾಸನ|ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ: ಶಾಸಕ ಎಚ್.ಕೆ.ಸುರೇಶ್‌

ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:40 IST
Last Updated 21 ಜನವರಿ 2026, 5:40 IST
<div class="paragraphs"><p>ಹಾಸನದ ರೆಡ್‌ಕ್ರಾಸ್‌ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ಎಚ್.ಕೆ. ಸುರೇಶ್‌ ಮಾತನಾಡಿದರು.</p></div>

ಹಾಸನದ ರೆಡ್‌ಕ್ರಾಸ್‌ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ಎಚ್.ಕೆ. ಸುರೇಶ್‌ ಮಾತನಾಡಿದರು.

   

ಹಾಸನ: ರಾಜ್ಯದಲ್ಲಿ ಕಾಡಾನೆ-ಮಾನವ ಸಂಘರ್ಷದಿಂದ ಸಂಭವಿಸುತ್ತಿರುವ ಪ್ರಾಣಹಾನಿ ಹಾಗೂ ಬೆಳೆ ಹಾನಿ ತಪ್ಪಿಸಿ, ನಿರ್ದಿಷ್ಟ ಪರಿಹಾರ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದಿಡಲು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಸೋಮವಾರ ಇಲ್ಲಿನ ರೆಡ್ ಕ್ರಾಸ್ ಭವನದಲ್ಲಿ ಬೇಲೂರು, ಆಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕು ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಬೆಳೆಗಾರರ ಸಂಘಟನೆಗಳು, ರೈತ ಸಂಘ, ದಲಿತ ಸಂಘಟನೆಗಳು, ಕಾರ್ಮಿಕರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ADVERTISEMENT

ಹಿರಿಯ ರೈತ ಮುಖಂಡ ಅರೇಹಳ್ಳಿ ರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಿಗೆ ಮೋಹನ್ ಹಾಗೂ ಆರ್.ಪಿ. ವೆಂಕಟೇಶಮೂರ್ತಿ ಅವರನ್ನು ಪ್ರಧಾನ ಸಂಚಾಲಕರನ್ನಾಗಿ ಹಾಗೂ ಎಚ್.ಎಂ. ವಿಶ್ವನಾಥ್, ಟಿ.ಪಿ. ಸುರೇಂದ್ರ ಮತ್ತು ಬಿ.ಕೆ. ಚಂದ್ರಕಲಾ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕೋರ್ ಕಮಿಟಿ ಸದಸ್ಯರನ್ನಾಗಿ ಹಳಸೆ ಶಿವಣ್ಣ, ಹುರುಡಿ ಮೋಹನ್ ಕುಮಾರ್, ಕೆ.ಎಸ್. ಮಂಜೇಗೌಡ, ತೊ.ಚ. ಅನಂತ ಸುಬ್ಬರಾವ್, ಅರೇಹಳ್ಳಿ ರಾಜೇಗೌಡ, ಕೆ.ಬಿ. ಕೃಷ್ಣಪ್ಪ, ಎಚ್.ಎಸ್‌. ಕಿಶೋರ್ ಕುಮಾರ್, ಕೊಡಗಿನ ಕೆ.ಕೆ. ವಿಶ್ವನಾಥ್, ಉಮಾಶಂಕರ್ ಕೆ.ಬಿ. ಲೋಕೇಶ್, ಬಿ.ಎಂ. ನಾಗರಾಜ್, ಅದ್ದೂರಿ ಕುಮಾರ್, ಬಾಳ್ಳುಗೋಪಾಲ್, ಯಡೇಹಳ್ಳಿ ಮಂಜುನಾಥ್, ಎಸ್.ಆರ್. ಲಕ್ಷ್ಮೀನಾರಾಯಣ್, ಎಚ್. ಆರ್. ನವೀನ್ ಕುಮಾರ್, ಧರ್ಮೇಶ್, ಎಂ.ಸಿ.ಡೋಂಗ್ರೆ, ಮಲ್ನಾಡ್ ಮೆಹಬೂಬ್, ಎಸ್.ಎನ್. ಮಲ್ಲಪ್ಪ, ಜೈ ಭೀಮ್ ಮಂಜು ಹಾಗೂ ಅಬ್ದುಲ್ ಸಮದ್ ಅವರನ್ನು ಆರಿಸಲಾಯಿತು.

ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಎ. ಮಂಜು, ಎಚ್.ಕೆ. ಸುರೇಶ್, ಸಿಮೆಂಟ್ ಮಂಜು, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಬಿ.ಶಿವರಾಂ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಲಕ್ಷ್ಮಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರನ್ನು ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ.

ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ವಿವಿಧ ಜನಪ್ರತಿನಿಧಿಗಳು ಒಳಗೊಂಡಂತೆ ಸಮಿತಿಗೆ ಅಗತ್ಯ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಸಂಚಾಲಕರ ಮಂಡಲಿಗೆ ಅಧಿಕಾರ ನೀಡಲಾಗಿದೆ.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ‘ಆನೆಗಳ ದಾಳಿಯಿಂದ ಸಾವುಗಳಾದಾಗ ಪರಿಹಾರ ವಿತರಿಸುವುದರ ಜೊತೆಗೆ, ಸಮಸ್ಯೆಗೆ ಪೂರ್ಣ ವಿರಾಮ ಹಾಕಲು ಕಾರ್ಯಕ್ರಮ ಅಗತ್ಯ. ಆನೆಧಾಮ ನಿರ್ಮಿಸಲು ಸ್ಥಳ, ಆಹಾರ ಮತ್ತು ನೀರಿನ ಕೊರತೆ ಇಲ್ಲ. ಇಚ್ಛಾಶಕ್ತಿಯ ಕೊರತೆ ಇದೆ’ ಎಂದರು.

ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ‘ಬೇಲೂರು ತಾಲ್ಲೂಕಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬಿಕ್ಕೋಡು ಹಾಗೂ ಅರೆಹಳ್ಳಿ ಭಾಗದಲ್ಲಿ ಸಂಜೆ ನಂತರ ಮನೆಯಿಂದ ಆಚೆ ಬರಲು ಜನ ಭಯಪಡುತ್ತಿದ್ದಾರೆ. ವಿಧಾನಸಭೆಯಲ್ಲಿ ಕಾಡಾನೆ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಪರಿಹಾರ ಕಂಡುಕೊಳ್ಳಲೇಬೇಕು. ಪಕ್ಷಾತೀತವಾಗಿ ಸಂಘಟನೆಗಳನ್ನು ಒಟ್ಟಿಗೆ ತರುವ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲವಿದೆ. ಪ್ರಧಾನಿ ಅಥವಾ ಮುಖ್ಯಮಂತ್ರಿ ಬಳಿ ಹೋಗುವ ನಿಯೋಗದಲ್ಲಿ ಪಾಲ್ಗೊಳ್ಳುವೆ’ ಎಂದರು.

ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ತೊ.ಚ. ಅನಂತ ಸುಬ್ಬರಾವ್, ಬಿ.ಕೆ. ಚಂದ್ರಕಲಾ, ಹಳಸ ಶಿವಣ್ಣ, ಮುರುಡಿ ಮೋಹನ್ ಕುಮಾರ್, ಅದ್ದೂರಿ ಕುಮಾರ್, ಎಚ್.ಆರ್. ನವೀನ್ ಕುಮಾರ್, ಎಂ.ಸಿ. ಡೊಂಗ್ರೆ, ಬಿ.ಎನ್. ನಾಗರಾಜ್, ಐಗೂರು ಅರ್ಜುನ್ ಸಲಹೆಗಳನ್ನು ನೀಡಿದರು. ರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು.

ನಮಿಬಿಯಾದಿಂದ ಚಿರತೆಗಳನ್ನು ತಂದು ಸಾಕಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಬಳಿ ₹3600 ಕೋಟಿ ಕಾಂಪಾ ನಿಧಿ ಇದ್ದು ಆನೆಗಳ ಬಳಸಿಕೊಳ್ಳಬೇಕು
ಎಚ್.ಆರ್. ಲಕ್ಷ್ಮಿ ನಾರಾಯಣ ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ
ಶ್ರೀಲಂಕಾದಲ್ಲಿ ಕೇವಲ 25 ಎಕರೆಯಲ್ಲಿ 60 ಆನೆಗಳನ್ನು ಸಾಕಲಾಗುತ್ತಿದೆ. ಶಿಬಿರವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿಯೂ ರೂಪಿಸಬಹುದು. ಆನೆಗಳನ್ನು ಸ್ಥಳಾಂತರಿಸಿ ಪುನರ್ವಸತಿ ಯೋಜನೆ ರೂಪಿಸಬೇಕು
ಹೆಮ್ಮಿಗೆ ಮೋಹನ್ ರೆಡ್‌ ಕ್ರಾಸ್ ಜಿಲ್ಲಾ ಸಮಿತಿ ಸಭಾಪತಿ
ಕರ್ನಾಟಕದಲ್ಲಿ 6400 ಕೇರಳದಲ್ಲಿ 3 ಸಾವಿರ ಆನೆಗಳಿವೆ. ನಾಡಿಗೆ ಬಂದು ಸಂತತಿ ವೃದ್ಧಿಯಾಗಿರುವ ಆನೆಗಳನ್ನು ಶ್ರೀಲಂಕಾ ಮಾದರಿಯ ಶಿಬಿರಕ್ಕೆ ತಂದು ಸಾಕುವುದೇ ನಮಗಿರುವ ಏಕೈಕ ಪರಿಹಾರ
ಎಚ್. ಎಂ. ವಿಶ್ವನಾಥ್ ಮಾಜಿ ಶಾಸಕ

ಪ್ರತ್ಯೇಕ ಮಂಡಳಿ ಅಗತ್ಯ

‘ಆನೆಗಳ ಪುನರ್ವಸತಿಗಾಗಿ ಪ್ರತ್ಯೇಕ ಮಂಡಳಿ ರಚಿಸುವ ಅಗತ್ಯವಿದೆ’ ಎಂದು ಸಮಿತಿ ಪ್ರಧಾನ ಸಂಚಾಲಕ ಆರ್.ಪಿ. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು. ‘ಮಂಡಳಿಯಲ್ಲಿ ಪೀಡಿತ ಪ್ರದೇಶಗಳ ಸಂಸದರು ಶಾಸಕರು ಬೆಳೆಗಾರರು ಜನಪರ ಸಂಘಟನೆಗಳ ಪ್ರತಿನಿಧಿಗಳಿರಬೇಕು. ಸ್ಥಳೀಯರೇ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿ ಕಾರ್ಯದರ್ಶಿ ಇರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು. ಸಾಮಾಜಿಕ ಹೊಣೆಗಾರಿಕೆ ನಿಧಿ ಪಡೆಯುವ ಅಧಿಕಾರವೂ ಇರಬೇಕು’ ಎಂದು ಸಲಹೆ ನೀಡಿದರು.

₹1 ಕೋಟಿ ಪರಿಹಾರ ನೀಡಿ

‘ಆನೆಗಳೊಂದಿಗೆ ಹೊಂದಿಕೊಂಡು ಹೋಗಬೇಕು ಎಂಬ ಸಲಹೆ ನೀಡುವವರಿಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಶಾಶ್ವತ ಪರಿಹಾರ ಆಗುವ ತನಕ ಆನೆ ದಾಳಿಯಲ್ಲಿ ಮೃತಪಡುವ ರೈತರು ಹಾಗೂ ಕಾರ್ಮಿಕರ ಕುಟುಂಬಗಳಿಗೂ ಅರಣ್ಯ ಸಿಬ್ಬಂದಿಗೆ ನೀಡುವಂತೆ‌ ₹1 ಕೋಟಿ ಪರಿಹಾರ ನೀಡಬೇಕು. ಬೆಳೆ ಆನೆಗೆ ಗರಿಷ್ಠ ಪರಿಹಾರ ನೀಡಬೇಕು’ ಎಂದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಒತ್ತಾಯಿಸಿದರು. ‘ಆನೆಗಳನ್ನು ಕುದುರೆಮುಖ ಭದ್ರಾ ಹೊಂಗಡಹಳ್ಳಿ ಭಾಗದ ಸುಮಾರು ಒಂದು ಲಕ್ಷ ಎಕರೆ ಪ್ರದೇಶಕ್ಕೆ ಸ್ಥಳಾಂತರಿಸಿ ಆಹಾರ ಪದಾರ್ಥಗಳನ್ನು ಬೆಳೆದು ಕೊಡಬಹುದು. ಸಮತೋಲನ ಕಾಪಾಡಲು ಕಾಡುಪ್ರಾಣಿಗಳ ಸಂಖ್ಯೆಯನ್ನೂ ನಿಯಂತ್ರಿಸಬೇಕು ಎಂದು ಪರಿಸರ ತಜ್ಞ ಗಾಡ್ಗೀಳ್ ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.