ADVERTISEMENT

ಜಿಲ್ಲೆಗೆ ಹೊಸ ಕಾಡಾನೆಗಳ ಪ್ರವೇಶ: ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:34 IST
Last Updated 10 ಜನವರಿ 2026, 4:34 IST
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡ ಕಾಡಾನೆ
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡ ಕಾಡಾನೆ   

ಹಾಸನ: ಜಿಲ್ಲೆಗೆ ಹೊಸ ಕಾಡಾನೆಗಳು ಪ್ರವೇಶಿಸುತ್ತಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೊಡಗು ಭಾಗದಿಂದ ಬಂದು ಅರಣ್ಯ ಪ್ರದೇಶ ಸೇರಿರುವ ದೈತ್ಯಾಕಾರದ ಒಂಟಿಸಲಗ ಹಾಗೂ ಎರಡು ಉದ್ದನೆಯ ದಂತಗಳನ್ನು ಹೊಂದಿರುವ ಸಲಗ ಕಾಣಿಸಿಕೊಂಡಿವೆ.

ಇನ್ನೊಂದೆಡೆ ಕಾಡಾನೆಗಳು ಹಿಂಡುಹಿಂಡಾಗಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪ ಈ ಘಟನೆಗಳು ನಡೆದಿವೆ. ಆಹಾರ ಅರಸಿ ಕಾಡಾನೆ ಬೇಲೂರು ತಾಲ್ಲೂಕಿನ ಕಾಫಿ ತೋಟದೊಳಗಿರುವ ಮನೆಯ ಮುಂಭಾಗಕ್ಕೆ ಬಂದಿದ್ದು, ಕೆಲ ಸಮಯ ಮನೆಯ ಸಮೀಪದಲ್ಲೇ ಓಡಾಡಿದೆ. ಬಳಿಕ ಮತ್ತೆ ಕಾಫಿ ತೋಟದೊಳಗೆ ತೆರಳಿದೆ. ಈ ಪ್ರದೇಶದಲ್ಲಿ ಅರಣ್ಯ ಹಾಗೂ ಕಾಫಿ ತೋಟಗಳಲ್ಲೇ ಕಾಡಾನೆಗಳು ಹೆಚ್ಚಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ.

ಕಾಡಾನೆಯ ಸಂಚಾರದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಕಾಡಾನೆಗಳ ಹಿಂಡು, ರಾತ್ರಿಯಿಡೀ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿ ಬಳಿಕ ಅರಣ್ಯದೊಳಗೆ ಮರಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಕಾಡಾನೆಗಳ ನಿರಂತರ ಕಾಟದಿಂದ ಬೇಲೂರು ತಾಲ್ಲೂಕಿನ ಕೆಲವು ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅರಣ್ಯ ಇಲಾಖೆಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.