ADVERTISEMENT

ಕಾಡಾನೆ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

ಸಾರ್ವಜನಿಕರು ಹಗಲು ಸಂಚರಿಸಲು ಭಯ ಪಡುವ ಸ್ಥಿತಿ: ಬೆಳೆಗಾರರ ಅಳಲು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:26 IST
Last Updated 13 ಜನವರಿ 2021, 13:26 IST
ಗೋಪಿನಾಥ್‌
ಗೋಪಿನಾಥ್‌   

ಹಾಸನ: ಮಲೆನಾಡು ಭಾಗದ ಕಾಡಾನೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಗೋಪಿನಾಥ್‌ ಎಚ್ಚರಿಕೆ ನೀಡಿದರು.

ಎರಡು ದಶಕಗಳಿಂದ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಕಾಡಾನೆ ಸಮಸ್ಯೆ ನಿರಂತರವಾಗಿದೆ. ಕಾಡಾನೆ ದಾಳಿಯಿಂದ ಈವರೆಗೆ 41 ಜನ ಪ್ರಾಣ ಕಳೆದುಕೊಂಡಿದ್ದು, ಕೋಟ್ಯಂತರ ಮೌಲ್ಯದ ಬೆಳೆ ನಷ್ಟ ಆಗಿದೆ. ಆದರೆ ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರವೂ ಸಮಯಕ್ಕೆ ಸರಿಯಾಗಿ ಸಿಗದೆ, ಕಚೇರಿಗಳನ್ನು ಅಲೆಯುವ ಸ್ಥಿತಿ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಮಲೆನಾಡು ಭಾಗದಲ್ಲಿ ಅಂದಾಜು 70 ಕಾಡಾನೆಗಳಿವೆ. ಪ್ರಸ್ತುತ ಒಂದು ಪುಂಡಾನೆ ಸೆರೆಗೆ ಮತ್ತು ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಒಂದು ಆನೆ ಸ್ಥಳಾಂತರಕ್ಕೆ ಸುಮಾರು ₹20 ಲಕ್ಷ ಖರ್ಚು ಮಾಡಲಾಗುತ್ತದೆ. ಆನೆ ಸ್ಥಳಾಂತರ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾಡಾನೆ ಸಮಸ್ಯೆ, ಅರಣ್ಯದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಆನಂದ್‌ ಸಿಂಗ್‌ ಎಂಬುವವರಿಗೆ ಅರಣ್ಯ ಖಾತೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಆಲೂರಿನಲ್ಲಿ ರೈತ ಹಾಗೂ ಅರೇಹಳ್ಳಿ ಸಮೀಪ ಸಾಲ್ಡನ್‌ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟರೂ ಅರಣ್ಯ ಸಚಿವರು ಪ್ರತಿಕ್ರಿಯೆ ನೀಡಲಿಲ್ಲ ಎಂದು ಆರೋಪಿಸಿದರು.

ಕಾಡಾನೆ ಸಮಸ್ಯೆಯಿಂದ ಮಲೆನಾಡು ಭಾಗದ ರೈತರು ಬೇಸತ್ತು ಹೋಗಿದ್ದಾರೆ. ಬಹುತೇಕ ಕಾಫಿ ತೋಟಗಳಿಗೆ
ಕೂಲಿ ಕಾರ್ಮಿಕರು ಬರುತ್ತಿಲ್ಲ. ಆದ್ದರಿಂದ ತೋಟ ನಿರ್ವಹಣೆಯೇ ಮಾಡುತ್ತಿಲ್ಲ. ಅನೇಕರು ಭತ್ತ
ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಸಾರ್ವಜನಿಕರು ಹಗಲು ಹೊತ್ತಿನಲ್ಲೇ ಓಡಾಡಲು ಭಯಪಡಬೇಕಾದ ಸ್ಥಿತಿ
ನೀರ್ಮಾಣವಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದರೆ ಆ ಭಾಗದ ರೈತರ ಜಮೀನನ್ನು ಎಕರೆಗೆ ₹60 ಲಕ್ಷಕ್ಕೆ ಮಾರಾಟ ಮಾಡಲು ಸಿದ್ಧರಿದ್ದು, ಸರ್ಕಾರ ಖರೀದಿ ಮಾಡಬೇಕು. ಅಲ್ಲಿಂದ
ಬೇರೆಡೆಗೆ ಹೋಗಿ ಜೀವನ ನಡೆಸುತ್ತೇವೆ ಎಂದು ಹೇಳಿದರು.

ಗೊಷ್ಠಿಯಲ್ಲಿ ಕರ್ನಾಟಕ ಪ್ರದೇಶ ರೈತ ಸಂಘದ ಜಿಲ್ಲಾ ಅಧ್ಯಕ್ಷೆ ಪಾರ್ವತಿ, ಕೆ.ಹೊಸಕೋಟೆ ಹೋಬಳಿ
ಅಧ್ಯಕ್ಷ ಮೋಹನ್‌, ಕಾಫಿ ಬೆಳೆಗಾರ ಮಂಜುನಾಥ್‌, ಕರವೇ ಕೆ.ಹೊಸಕೋಟೆ ಹೋಬಳಿ ಅಧ್ಯಕ್ಷ ವಿವೇಕ್‌
ವೈದ್ಯನಾಥ್‌, ಅಭಿಶೇಕ್‌, ಕಾಡ್ಲೂರಿನ ಜಯಣ್ಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.