ADVERTISEMENT

ಎಲ್ಲವೂ ನನ್ನಿಂದಲೇ ಆಯಿತು ಎನ್ನುವ ಮೋದಿ: ಪ್ರಧಾನಿ ವಿರುದ್ಧ ದೇವೇಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 17:55 IST
Last Updated 28 ಫೆಬ್ರುವರಿ 2019, 17:55 IST
ಎಚ್‌.ಡಿ.ದೇವೇಗೌಡ ಹಾಗೂ ನರೇಂದ್ರ ಮೋದಿ
ಎಚ್‌.ಡಿ.ದೇವೇಗೌಡ ಹಾಗೂ ನರೇಂದ್ರ ಮೋದಿ   

ಹಾಸನ: ‘ಪಾಕ್ ಉಗ್ರರ ಮೇಲೆ ವೈಮಾನಿಕ ದಾಳಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ನನ್ನಿಂದಲೇ ಆಯಿತು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಸಂಸದ ಎಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಮೋದಿಯವರಿಗೆ ದೇಶದ ಜನ 282 ಸ್ಥಾನ ಕೊಟ್ಟರು. ದೇಶ ಆಡಳಿತ ಅವರ ಕೈಯಲ್ಲೇ ಇದೆ. ಆದರೂ ದೇಶದ ಮುಕುಟ ಎನಿಸಿಕೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಈಗಲೂ ಕೆಟ್ಟ ಪರಿಸ್ಥಿತಿ ಇದ್ದು, ಇದಕ್ಕೆ ಏನು ಕಾರಣ ಎಂಬುದನ್ನು ಅವರೇ ಹೇಳಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೇಶ ಸಂಕಷ್ಟದಲ್ಲಿದ್ದು, ಎಲ್ಲರೂ ಪ್ರಧಾನಿ ಜೊತೆ ನಿಲ್ಲಬೇಕು. ಎಲ್ಲೋ ಒಂದು ಕಡೆ ಐಕ್ಯತೆ ತೋರಿಸುವಲ್ಲಿ ಮುಗ್ಗರಿಸುತ್ತಿದ್ದೇವೆ ಎನ್ನುವ ಆತಂಕ ಕಾಡುತ್ತಿದೆ. ಪೈಲಟ್ ಪಾಕ್ ವಶದಲ್ಲಿದ್ದಾರೆ. ನಮ್ಮ ಯೋಧರು ನಡೆಸಿದ ವೈಮಾನಿಕ ದಾಳಿ ಬಗ್ಗೆ ಹೆಮ್ಮೆ ಇದೆ. ಅದನ್ನು ಬಿಟ್ಟು ಎಲ್ಲವೂ ನನ್ನಿಂದಲೇ ಆಗಿದ್ದು ಎನ್ನುವಂತೆ ಬಿಂಬಿಸಿಕೊಳ್ಳೋದು ಸರಿಯಲ್ಲ’ ಎದು ಮೋದಿ ವಿರುದ್ಧ ಕಿಡಿ ಕಾರಿದರು.

ADVERTISEMENT

‘ಪ್ರಧಾನಿ ಅವರಿಗೆ ವಿರೋಧ ಪಕ್ಷದವರ ಮೇಲೆ ಅದರಲ್ಲೂ ಕಾಂಗ್ರೆಸ್ ಮೇಲೆ ಸಿಟ್ಟಿದೆ. ನಿರ್ಲಕ್ಷ್ಯ ಮನೋಭಾವನೆ ಇದೆ. ಇಂಥ ಮನಸ್ಥಿತಿ ಸರಿಯಲ್ಲ. ಯುದ್ಧ ಮಾಡುವವರು ಸೈನಿಕರು. ಅದನ್ನು ಎಂದೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂದರು.

ಇದೇ ವೇಳೆ ಶಾಂತಿ ಭಿಕ್ಷೆ ಬೇಡುತ್ತಿರುವ ಪಾಕ್ ನಡೆ ಕುರಿತು ಪ್ರತಿಕ್ರಿಯಿಸಿದ ಗೌಡರು, ‘ಉಗ್ರರಿಗೆ ಆಶ್ರಯಕೊಟ್ಟು ತಪ್ಪು ಮಾಡಿದ್ದೇವೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಾಗಿದೆ. ಆದರೆ, ಅವರು ಏನೇ ಪ್ರಹಸನ ಮಾಡಿದರೂ, ಅವರ ಮೇಲಿನ ಸಂಶಯ ಹೋಗುವುದಿಲ್ಲ. ಪಾಕ್ ಗಿಂತ ನಾವು ಎಲ್ಲಾ ರೀತಿಯಿಂದಲೂ ಸಮರ್ಥರಿದ್ದೇವೆ. ಆದರೆ, ಅವರಿಗೂ ಸಹಾಯ ಮಾಡುವ ಹೊರಗಿನ ಶಕ್ತಿಗಳಿವೆ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

‘ದೇಶದಲ್ಲಿ ಯುದ್ಧ ಭೀತಿ ಕಾರಣದಿಂದ ಲೋಕಸಭೆ ಚುನಾವಣೆ ಮುಂದಕ್ಕೆ ಹೋಗಲಿದೆ ಎಂದು ನನಗನ್ನಿಸದು. ಆದರೆ, ಕಾಶ್ಮೀರ ಚುನಾವಣೆ ಮುಂದೂಡಬಹುದು’ ಎಂದು ಅಭಿಪ್ರಾಯಪಟ್ಟರು.

‘ಯುದ್ಧ ಗೆದ್ದರೆ ಜನರ ಮನಸ್ಸು ಗೆಲ್ಲಲಾಗದು’

‘ವೈಮಾನಿಕ ದಾಳಿ ನಂತರ ದೇಶದಲ್ಲಿ ಮೋದಿ ಪರವಾದ ಅಲೆ ಹೆಚ್ಚಾಗಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗಲಿದೆ’ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಯಿಸಿದ ಗೌಡರು, ‘ಯಾರೂ ಹೀಗೆ ಮಾತನಾಡಬಾರದು. ವಾಜಪೇಯಿ ಅವರು ಭಾರತ ಪ್ರಕಾಶಿಸುತ್ತಿದೆ ಅಂದರು. ಕಾರ್ಗಿಲ್ ಯುದ್ಧ ಗೆದ್ದರು. ಆದರೂ ನಂತರದ ಚುನಾವಣೆಯಲ್ಲಿ ಸೋತರು. ಯುದ್ಧ ಗೆದ್ದಾಕ್ಷಣ ಚುನಾವಣೆ ಗೆಲ್ಲಲು ಆಗಲಿಲ್ಲ. ಕೆಲವು ಮಾತಿನಿಂದ ಜನರ ಮನಸ್ಸು ಗೆಲ್ಲಲು ಆಗುವುದಿಲ್ಲ. ಜನರ ಮನಸ್ಥಿತಿಯ ಮೇಲೆ ಎಲ್ಲವೂ ನಿರ್ಧಾರವಾಗಲಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.