ADVERTISEMENT

ಇಂಗ್ಲಿಷ್‌ ಮಾಧ್ಯಮ ಶಾಲೆ; ಹಿಂದೆ ಸರಿಯುವ ಮಾತೇ ಇಲ್ಲ: ಸಚಿವ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 17:02 IST
Last Updated 2 ಜನವರಿ 2019, 17:02 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಶ್ರೀಮಂತರ ರೀತಿ ಎಲ್ಲಾ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬುದ್ದಿ ಜೀವಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಅವರು ತಮ್ಮ ಮಕ್ಕಳಂತೆಯೇ ಬಡವರ ಮಕ್ಕಳು ಎಂಬುದನ್ನು ಮನಗಾಣಬೇಕು. ಈ ಬಾರಿ ಬೆಂಗಳೂರಿಗೆ ಹೋದಾಗ ಮುಖ್ಯ ಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ 2019ರ ಶೈಕ್ಷಣಿಕ ವರ್ಷ ಆರಂಭದಿಂದಲೇ ಇಂಗ್ಲಿಷ್‌ ಮಾಧ್ಯಮ ಆರಂಭಿಸುವಂತೆ ಮಾತನಾಡಲಾಗುವುದು. ಬುದ್ಧಿ ಜೀವಿಗಳಸಭೆ ಕರೆದು ಸಾಧಕ ಬಾಧಕಗಳನ್ನುಚರ್ಚೆ ಮಾಡಲಿ. ಇಂಗ್ಲಿಷ್‌ ಮಾಧ್ಯಮ ತೆರೆಯುವುದು ಬೇಡ ಎಂದಾದರೆಪರ್ಯಾಯದ ಕುರಿತು ಹೇಳಲಿ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಭಾವಿ ವ್ಯಕ್ತಿಗಳ ಒಡೆತನದಲ್ಲಿದ್ದು, ಡೊನೇಷನ್‌ ಹಾವಳಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಸರ್ಕಾರದ ವತಿಯಿಂದ ಇಂಗ್ಲೀಷ್‌ ಮಾಧ್ಯಮ ಶಾಲೆ ತೆರೆಯಲು ಮುಂದಾಗಲಾಗಿದೆ. ಇಂಗ್ಲೀಷ್‌ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಿ ಇಲ್ಲವೆ ರಾಜ್ಯದ ಎಲ್ಲಾ ಇಂಗ್ಲೀಷ್‌ ಶಾಲೆಗಳನ್ನು ಮುಚ್ಚಲಿ, ಬಡವರಿಗೊಂದು, ಶ್ರೀಮಂತರಿಗೆ ಒಂದು ಎಂಬ ತಾರತಮ್ಯ ಸಲ್ಲದು ಎಂದರು.

ಸರ್ಕಾರ ಸುಭದ್ರ: ರಮೇಶ್‌ ಜಾರಕಿಹೊಳಿ ಸಜ್ಜನ ರಾಜಕಾರಣಿ, ತುಂಬಾ ಪ್ರಮಾಣಿಕರು ಅವರು ನಾನು ತುಂಬಾ ಆತ್ಮೀಯರು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಇನ್ನೂ ಕೆಲವೇ ದಿನಗಳಲ್ಲಿ ಶಮನವಾಗಲಿದೆ. ಸರ್ಕಾರವನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಸುಭದ್ರವಾಗಿ ಆಡಳಿತ ನಡೆಸಲಾಗುವುದು ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ ರೇವಣ್ಣ ಅವರಿಗೆ ಹಾಸನ ಲೋಕಸಭೆ ಸ್ಥಾನಕ್ಕೆ ಟಿಕೆಟ್‌ ನೀಡುವ ವಿಚಾರವಾಗಿ. ಪಕ್ಷದ ವರಿಷ್ಠರು, ನಾಯಕರು, ಶಾಸಕರು ಕುಳಿತು ಚರ್ಚಿಸಿ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು. ಚುನಾವಣೆಗೆ ಇನ್ನೂ ಕಾಲಾವಕಾಶ ಇದ್ದು, ಚುನಾವಣೆ ಹತ್ತಿರ ಬಂದಾಗ ನೋಡಿಕೊಳ್ಳೋಣಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.