
ಗಂಡಸಿ: ಪೋಷಕರೇ ತಮ್ಮ ಮಕ್ಕಳ ಇಂಗ್ಲಿಷ್ ಕಲಿಕೆ ಬಗ್ಗೆ ಕಾಳಜಿ ಇರಲಿ. ಆದರೆ ಅತಿಯಾದ ವ್ಯಾಮೋಹ ಬೇಡ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.
ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗಂಡಸಿ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1 ರಿಂದ 6ನೇ ತರಗತಿಯವರೆಗೆ ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ 7 ತರಗತಿಗೂ ಬೋಧಿಸಲಾಗುವುದು ಎಂದರು.
ಪೋಷಕರು ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಪಾವತಿಸಿ 25 ರಿಂದ 30 ಕಿ.ಮೀ. ದೂರದ ತಾಲ್ಲೂಕು ಕೇಂದ್ರಗಳ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಬದಲು ತಮ್ಮ ಗ್ರಾಮದಲ್ಲೇ ನುರಿತ ಶಿಕ್ಷಕರಿಂದ ಉಚಿತ ಶಿಕ್ಷಣ, ಬಿಸಿಯೂಟ, ಕ್ಷೀರ ಭಾಗ್ಯ, ವಿದ್ಯಾರ್ಥಿ ವೇತನ, ಸಮವಸ್ತ್ರ ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯುವ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳಿದರು.
ಗಂಡಸಿ ಶಾಲೆಯಲ್ಲಿ ಮಕ್ಕಳ ದಾಖಲಾತಿ 206 ಇದ್ದು, ಪ್ರತಿ ವರ್ಷ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚುತ್ತಿದೆ. ಶಿಕ್ಷಕರ ಪರಿಶ್ರಮ, ಹಳೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಶಾಲೆಗೆ ಬೇಕಾಗುವ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಿರುವುದು ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಗಂಡಸಿ ಅಕ್ಕ ಪಕ್ಕದ ಗ್ರಾಮಗಳ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಒಂದು ಸಾರಿ ಶಾಲೆ ಮುಚ್ಚಿದರೆ ಮತ್ತೆ ಪ್ರಾರಂಭಿಸುವುದು ಕಷ್ಟ. ಗ್ರಾಮಸ್ಥರು, ಪೋಷಕರ ಮನವೊಲಿಸುವ ಮೂಲಕ ತಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳ ಉಳುವಿಗಾಗಿ ಶ್ರಮಿಸಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಯ್ಯಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮಂಜುನಾಥ್, ಮಾಜಿ ಉಪಾಧ್ಯಕ್ಷರಾದ ಕೋಟಿ ಪ್ರದೀಪ್, ನಾಗರಾಜ್, ಕುಮಾರ್, ಎಸ್‌ಡಿಎಂಸಿ ಸದಸ್ಯರಾದ ಮಹಾಲಿಂಗಪ್ಪ, ನೇತ್ರಾವತಿ, ವೀಣಾ ಸಮಾಜಸೇವಕ ಚಂದ್ರಣ್ಣ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.