
ಸಕಲೇಶಪುರ: ಎತ್ತಿನಹೊಳೆ ಯೋಜನೆ ಚೆಕ್ ಡ್ಯಾಂ ಕಾಮಗಾರಿ ಮಾಡಿ, ತಾಲ್ಲೂಕಿನ ಕ್ಯಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಡುಗದ್ದೆ ಗ್ರಾಮದ ರಸ್ತೆಯನ್ನೇ ಸಂಪೂರ್ಣ ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಕ್ಯಾನಹಳ್ಳಿ–ನೂದರಹಳ್ಳಿ ರಸ್ತೆಯ ಮಂಚಳ್ಳಿ ಬಳಿಯಿಂದ ಕಾಡುಗದ್ದೆ ಗ್ರಾಮಕ್ಕೆ ಎರಡು ಕಿ.ಮೀ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಗ್ರಾಮದಲ್ಲಿ ಸುಮಾರು 10 ವಾಸದ ಮನೆಗಳಿದ್ದು, 2 ವರ್ಷಗಳ ಹಿಂದೆ ಈ ಮನೆಗಳಿಗೆ ಸಂಪರ್ಕ ಕಲ್ಪಿಸಲು ಹಾಗೂ ಎತ್ತಿನಹೊಳೆ ಪವರ್ ಹೌಸ್ ಸಂಪರ್ಕಕ್ಕೆ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಮಾತ್ರ ಮಾಡಿಲ್ಲ ಎನ್ನುವುದು ಜನರ ದೂರು.
ಹಾಲಿ ಹಾಗೂ ಹಿಂದಿನ ಶಾಸಕರು ಈ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲ. ಗ್ರಾಮಸ್ಥರೇ ಸೇರಿಕೊಂಡು ಮಣ್ಣಿನ ರಸ್ತೆಯ ಗುಂಡಿ ಮುಚ್ಚುವುದು ಹಾಗೂ ಚರಂಡಿ ಸೋಸುವ ಕೆಲಸ ಮಾಡಿಕೊಂಡು ಹೇಗೋ ಓಡಾಡುತ್ತಿದ್ದಾರೆ.
5 ವರ್ಷಗಳಿಂದ ಎತ್ತಿನಹೊಳೆ ಚೆಕ್ ಡ್ಯಾಂ ನಿರ್ಮಾಣ ಪ್ರಾರಂಭವಾಗಿದ್ದು, ಇದೇ ಕಚ್ಚಾರಸ್ತೆಯಲ್ಲಿ ಭಾರಿ ಗಾತ್ರದ ಹಿಟಾಚಿ ಯಂತ್ರಗಳು, ಟಿಪ್ಪರ್‌ಗಳು ಓಡಾಡುತ್ತಾ ರಸ್ತೆಯನ್ನು ಕೆಸರು ಗದ್ದೆಯಂತೆ ಮಾಡಿವೆ. ವಾಹನಳು ಚಲಿಸುವುದಿರಲಿ, ನಡೆದಾಡುವುದಕ್ಕೂ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ ಎನ್ನುತ್ತಾರೆ ಜನ.
‘ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ, ನಮ್ಮೂರಿನಿಂದ ಬಯಲುಸೀಮೆಗೆ ನೀರು ಹರಿಸುತ್ತಿದ್ದೀರಿ. ಕೇವಲ ಒಂದು ಕೋಟಿ ಖರ್ಚು ಮಾಡಿ ನಮ್ಮೂರಿನ ರಸ್ತೆಯೊಂದನ್ನು ಕಾಂಕ್ರಿಟೀಕರಣ ಮಾಡಿಕೊಡಿ ಎಂದು 5 ವರ್ಷಗಳಿಂದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೂ ರಸ್ತೆಯ ಕಾಮಗಾರಿ ಮಾಡಿಲ್ಲ. ನಮ್ಮ ವಾಹನಗಳಲ್ಲಿ ಅಲ್ಲ, ನಡೆದುಕೊಂಡು ಹೋಗುವುದಕ್ಕೂ ಸಹ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ. ಕೂಡಲೇ ಈ ರಸ್ತೆ ನಿರ್ಮಾಣ ಮಾಡಿಕೊಡಿ’ ಎಂದು ಗ್ರಾಮಸ್ಥರ ಬಿ.ಎಲ್. ಕಾರ್ಯಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.