ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ಮಕ್ಕಳ ಕಲಿಕೋತ್ಸವ ಜಾಗೂ ವಸ್ತುಪ್ರದರ್ಶನ ಗಮನ ಸೆಳೆಯಿತು.
ಜಿಲ್ಲೆಯ 75 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಬಗೆ ಬಗೆಯ ತರಕಾರಿ ಬೆಳೆಗಳು, ಸಸ್ಯಗಳು, ಬೇಸಾಯಕ್ಕೆ ಬಳಸುವ ಸಲಕರಣೆಗಳು, ಏಕದಳ, ದ್ವಿದಳ ಧಾನ್ಯಗಳು, ಅಂಜೂರ, ಬಾದಾಮಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಹಣ್ಣುಗಳು ಇದ್ದವು. ಬೇಲೂರು ತಾಲ್ಲೂಕು ತೊಳಲು ವೈಡಿಎನ್‌ಎಂ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶನಕ್ಕಿಟ್ಟಿದ್ದ ಎರೆಹುಳು ಗೊಬ್ಬರ ತಯಾರಿಕೆ, ಅಜೋಲ ಜೀವಾಮೃತ ಹಾಗೂ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ತಯಾರಿಸಿದ್ದ ಕೋಳಿ ಮನೆಯಲ್ಲಿ ಕೋಳಿಗಳು ಮೇವು ತಿಂದು ಹಾಕಿದ ಕಸ ಮೀನುಗಳಿಗೆ ಆಹಾರವಾಗಿ, ಮೀನಿನ ತ್ಯಾಜ್ಯ ಖನಿಜಾಂಶ ತೋಟದ ಬೆಳೆಗಳಿಗೆ ಹಾಯ್ದು ಸೊಪ್ಪು, ರೇಷ್ಮೆ ಬೆಳೆಗೆ ಗೊಬ್ಬರವಾಗಿ ಹಸಿರೆಲೆ ಹಸುಗಳಿಗೆ ಮೇವಾಗಿ ನಾನಾ ರೀತಿ ಆರ್ಥಿಕವಾಗಿ ಲಾಭವಾಗುವ ಮಾದರಿ ವಿಶೇಷವಾಗಿತ್ತು.
ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಮೇಳದ ಆಕರ್ಷಣೆ ಹೆಚ್ಚಿಸಿತು. ಹೊಲಿಗೆ ಯಂತ್ರ ತಯಾರಿಕೆ, ಕಸೂತಿ, ವಿಧವಿಧವಾದ ಉಲ್ಲಾನ್ ಬಟ್ಟೆಗಳು, ಉಡುಪಗಳು, ಮನೆ ಬಳಕೆ ವಸ್ತುಗಳು, ಬಣ್ಣದ ಅಲಂಕಾರಿಕ ವಸ್ತುಗಳು, ಹೂವು ಕುಂಡಗಳು ನೋಡುಗರ ಕಣ್ಣರಳಿಸಿದವು. ಬಿಇಒ ನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಕ್ಷರ ಜ್ಞಾನದ ಜತೆಗೆ ವೃತ್ತಿ ಶಿಕ್ಷಣದ ಅರಿವು ಮೂಡಿಸಲು ಪ್ರದರ್ಶನ ಆಯೋಜಿಸಲಾಗಿದೆ ಎಂದರು. ವಿವಿಧ ಶಾಲೆಯ ಮಕ್ಕಳು ಪ್ರದರ್ಶನ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.