
ಅರಸೀಕೆರೆ: ‘ಸರ್ಕಾರಗಳ ನೀತಿ ರೈತರ ಪರ ಇರಬೇಕು. ರೈತರು ಸಂಕಷ್ಟಗಳಿಂದ ದೂರವಾಗಲು ಬೆಂಬಲ ಬೆಲೆ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಒದಗಿಸಬೇಕು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ಕೃಷಿ ಇಲಾಖೆ, ಕೃಷಿಕ ಸಮಾಜ, ವಿವಿಧ ಇಲಾಖೆಗಳು ಹಾಗೂ ರೈತ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಇಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಆರ್ಥಿಕತೆ ಉತ್ತಮಗೊಳ್ಳಲು ಹಾಗೂ ಜನರು ನೆಮ್ಮದಿಯ ಜೀವನ ಸಾಗಿಸಲು ರೈತಾಪಿ ವರ್ಗದವರಿಂದ ಮಾತ್ರ ಸಾಧ್ಯ. ದೇಶದಲ್ಲಿ ತಯಾರಾದ ಕಚ್ಚಾ ವಸ್ತುಗಳು ದೇಶದಲ್ಲಿಯೇ ಖರ್ಚಾಗಬೇಕು. ಆಧುನಿಕ ಬೇಸಾಯ ಪದ್ದತಿಯನ್ನು ರೈತರು ಅನುಸರಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು. ಇದ್ದಕ್ಕೆ ಪೂರಕವಾಗುವಂತೆ ಮಾರುಕಟ್ಟೆ ಸೃಷ್ಟಿಸಿ, ಅವುಗಳಿಗೆ ಉತ್ತಮ ಬೆಲೆ ದೊರಕುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ವಹಿಸಬೇಕು’ ಎಂದರು.
‘ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಳಿಂದ ಪೆಟ್ರೋಲಿಯಂ ಉತ್ಪನ್ನಗಳು ತಯಾರಾಗುವಂತಹ ಅದೃಷ್ಟ ಕೂಡಿ ಬಂದಿದ್ದು, ಈ ನಿಟ್ಟಿನಲ್ಲಿ ಆಳುವ ಪ್ರಬುದ್ಧರು ಚಿಂತನೆ ಮಾಡಬೇಕಾಗಿದೆ. ವಿದೇಶಿ ಎಥೆನಾಲ್, ಪೆಟ್ರೋಲಿಯಂ ಉತ್ಪನ್ನಗಳ ಆಮದು ನಿಲ್ಲಿಸಿ, ಇಲ್ಲಿನ ರೈತರು ಬೆಳೆದ ಬೆಳೆಗಳಿಂದಲೇ ಉತ್ಪನ್ನ ಮಾಡಬೇಕು. ಆಗ ಮಾತ್ರ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ ಮಾತನಾಡಿ, ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ರೈತರ ಹಿತಾಸಕ್ತಿಗೆ ಶಾಸಕರ ಕೊಡುಗೆ ಸ್ಮರಣೀಯ ಎಂದು ಹೇಳಿದರು.
ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಸಲಕರಣೆಗಳು, ಭೂ ಸಂಪನ್ಮೂಲ ಕಾರ್ಡ್‌ಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ್, ಮುಖಂಡರಾದ ಶಿವಲಿಂಗಣ್ಣ ಹಾಗೂ ಮಂಜುಳಾ ಮಾತನಾಡಿದರು. ತಹಶೀಲ್ದಾರ್ ಎಂ.ಜಿ. ಸಂತೋಷ್‌ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಣ್ಣ , ತೋಟಗಾರಿಕೆ ಇಲಾಖಾ ಸಹಾಯ ನಿರ್ದೇಶಕಿ ಸೀಮಾ , ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್, ಕೃಷಿಕ ಸಮಾಜದ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಎನ್. ಶಿವು, ಟಿಎಪಿಎಂಎಸ್ ಅಧ್ಯಕ್ಷ ಕೆಲ್ಲಂಗರೆ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಕೃಷಿ ಇಲಾಖೆಯ ಅಧಿಕಾರಿ ಪ್ರಭಾವತಿ, ಸಂಘಟನೆಗಳ ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.
ಸಂಪೂರ್ಣ ನೀರಾವರಿ ಗುರಿ’
ಕೃಷಿ ಬದುಕು ಸುಧಾರಿಸಲು ಪ್ರಮುಖ ನೀರಾವರಿ ಮುಖ್ಯವಾಗಿದೆ. ಕ್ಷೇತ್ರದಲ್ಲಿ ಸಾವಿರಾರು ಚೆಕ್ ಡ್ಯಾಂ ನಿರ್ಮಿಸಿದ್ದರ ಫಲವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಎತ್ತಿನ ಹೊಳೆ ಯೋಜನೆ ಹೇಮಾವತಿ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಿಂದ ಅರಸೀಕೆರೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ಸಂಪೂರ್ಣ ನೀರಾವರಿ ಮಾಡುವುದೇ ನನ್ನ ಗುರಿ. ವಿದ್ಯುತ್ ಉತ್ಪಾದನೆಗೂ ಒತ್ತು ನೀಡುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು. ಹೈನುಗಾರಿಕೆ ರೈತರ ಜೀವನೋಪಾಯಕ್ಕೆ ಪ್ರಮುಖ ದಾರಿ. ಇವುಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಅರಸೀಕೆರೆ ಕ್ಷೇತ್ರ ನನಗೆ ರಾಜಕೀಯ ಶಕ್ತಿ ನೀಡಿದ್ದು ಇಲ್ಲಿನ ಜನರ ಋಣ ತೀರಿಸುವುದೇ ನನ್ನ ಕರ್ತವ್ಯ. ಕರ್ನಾಟಕ ರಾಜ್ಯದಲ್ಲೇ ಅರಸೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಹೋರಾಟದ ಹೆಜ್ಜೆಯಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.