ADVERTISEMENT

ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ; ರಾಗಿ ಪೂರ್ಣ ಖರೀದಿಸಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 15:25 IST
Last Updated 26 ಏಪ್ರಿಲ್ 2022, 15:25 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ವತಿಯಿಂದ ಧರಣಿ ನಡೆಸಲಾಯಿತು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ವತಿಯಿಂದ ಧರಣಿ ನಡೆಸಲಾಯಿತು   

ಹಾಸನ: ‘ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಮೆಕ್ಕೆಜೋಳವನ್ನು ರೈತರಿಂದ ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಬೇಕು’ ಎಂದು ಆಗ್ರಹಿಸಿರಾಜ್ಯ ರೈತ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತಿವೆ.ರಸಗೊಬ್ಬರ, ವಿದ್ಯುತ್ ದರ ಹೆಚ್ಚಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ರೈತರ ಸಂಪೂರ್ಣ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಟ್ರ್ಯಾಕ್ಟರ್ ಹಾಗೂ ಇತರೆ ಕೃಷಿ ಉಪಕರಣಗಳ ಗರಿಷ್ಠ ಮಾರುಕಟ್ಟೆ ದರ ನಿಗದಿಮಾಡಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಜೋಳ, ರಾಗಿ, ಭತ್ತ ಇತರೆಧಾನ್ಯಗಳನ್ನು ಎಂ.ಎಸ್‌.ಪಿ. ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿ ಮಾಡಿಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಸಂಪರ್ಕ ಕಡಿತಮಾಡುವುದನ್ನು ನಿಲ್ಲಿಸಬೇಕು. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ಪೂರೈಸಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಆಗಬೇಕು ಎಂದುಆಗ್ರಹಿಸಿದರು.

ರೈತರ ಜಮೀನು ಖಾತೆಗಳ ಪೋಡಿ ಹಾಗೂ ಹದ್ದುಬಸ್ತು ಮಾಡಲು ವಿಧಿಸುವಸರ್ಕಾರಿ ಶುಲ್ಕವನ್ನು ಅಧಿಕ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದುಖಂಡನೀಯ. ಬಿತ್ತನೆ ಬೀಜ ಸಮಪರ್ಕವಾಗಿ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ಅನ್ವಯವಾಗುವಂತೆವಿಸ್ತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾ ಅಧ್ಯಕ್ಷ ಎಚ್.ಕೆ.ರಘು ಹಿರೀಸಾವೆ, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತರಾಜ ಅರಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹರೀಶ್, ಕಾರ್ಯಾಧ್ಯಕ್ಷ ಶಿವಲಿಂಗಪ್ಪ, ಸೋಮೇಗೌಡ, ದಿನೇಶ್, ಶಿವಮೂರ್ತಿ, ರಾಮಚಂದ್ರ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.